ಮಂಡ್ಯ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಲೆಮಾರಿ ಸಮುದಾಯದ ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಪೋಷಕರ ವಿರುದ್ಧ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ನಾಗಮಂಗಲ ತಾಲ್ಲೂಕಿನ ಕರಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರಮ ಜನಾಂಗದ ರಕ್ಷಿತಾ ಅತ್ಯಾಚಾರಕ್ಕೆ ಒಳಗಾಗಿರುವ ನತದೃಷ್ಟ ಬುದ್ಧಿಮಾಂದ್ಯ ಯುವತಿಯಾಗಿದ್ದಾಳೆ. ಅದೇ ಗ್ರಾಮದ ಪಕ್ಕದ ಮನೆಯ ಅಶೋಕ್ ಅಲಿಯಾಸ್ ಬಾಬು ಎಂಬುವರ ಮಗ ಪ್ರೀತಂ ಬುದ್ದಿ ಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ.
ಯುವತಿಯ ತಂದೆ ಸುರೇಶ್ ಮತ್ತು ಭಾಗ್ಯಮ್ಮ ಶುಕ್ರವಾರ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಗಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿ ಒಬ್ಬಂಟಿಯಾಗಿದ್ದನ್ನು ಅರಿತ ಕಾಮುಕ ಪ್ರೀತಂ ಏಕಾಏಕಿ ಯುವತಿಯ ಮನೆಗೆ ನುಗ್ಗಿ ಮನಸೋ ಇಚ್ಛೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಜೋರಾಗಿ ಚೀರಾಡುತ್ತಿದ್ದಾಗ ನೆರೆಹೊರೆಯವರು ಬಂದು ಆಕೆಗೆ ಸಮಾಧಾನಪಡಿಸಿ ಆಕೆಯ ಪೋಷಕರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಅತ್ಯಾಚಾರ ಮಾಡಿದ ರಾಕ್ಷಸ ಪ್ರೀತಮನ ಪೋಷಕರನ್ನು ಕೇಳಲು ಹೋದಾಗ ಅತ್ಯಾಚಾರಿ ತಂದೆ, ತಾಯಿ ಮತ್ತಿರರು ಸಂತ್ರಸ್ತೆ ಪೋಷಕರನ್ನು ಹೀನಾಯವಾಗಿ ನಿಂದಿಸಿ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಪಾದಿಸಲಾಗಿದೆ.
ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಿ ಪ್ರೀತಂ ಸೇರಿ ನಾಲ್ವರ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಸಂಬಂಧ ಘಟನಾ ಸ್ಥಳಕ್ಕೆ ಡಿಎಸ್ಪಿ ಚಲುವರಾಜು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಕೆಎಂಎಸ್ ಮುಖಂಡರ ಭೇಟಿ
ಕರಿಕ್ಯಾತನಹಳ್ಳಿ ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶನಿವಾರ ಎಕೆಎಂಎಸ್ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ವಕೀಲ ಕಿರಣಕುಮಾರ್ ಕೊತ್ತಗೆರೆ, ಮೈಸೂರು ಜಿಲ್ಲಾ ಮುಖಂಡ ಕೊಡಗಳ್ಳಿ ರವಿಕುಮಾರ್, ಮಂಡ್ಯ ಜಿಲ್ಲಾ ಎಕೆಎಂಎಸ್ ಮುಖಂಡರಾದ ಗಂಗರಹಳ್ಳಿ ಸುರೇಶ್, ಪಡುವಲ ಪಟ್ಟಣ ನಂಜುಂಡಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಸಭೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ. ನಂತರ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಡಿಎಸ್ಪಿ ಚಲುವರಾಜು ಮತ್ತಿತರರೊಂದಿಗೆ ಚರ್ಚಿಸಿ ಸಂತ್ರಸ್ತೆ ಕುಟುಂಬಕ್ಕೆ ಶೀಘ್ರ ಹಾಗೂ ಅಗತ್ಯ ಕಾನೂನು ಬೆಂಬಲ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.





