Mysore
36
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ವಿಜೃಂಭಣೆಯಿಂದ ನಡೆದ ರಂಗನಾಥಸ್ವಾಮಿ ರಂಗಮುಡಿ ಉತ್ಸವ

ಶ್ರೀರಂಗಪಟ್ಟಣ: ಇಲ್ಲಿನ ಐತಿಹಾಸಿಕ ಶ್ರೀರಂಗನಾಥಸ್ವಾಮಿ ರಂಗಮುಡಿ ಉತ್ಸವ ಗುರುವಾರ(23-04-2026) ರಾತ್ರಿ ಸಂಭ್ರಮದಿಂದ ನೆರವೇರಿತು.

ಮೇಷ ಮಾಸ, ಶುಕ್ಲಪಕ್ಷ, ಸಪ್ತಮಿ ದಿನದಂದು ಗೌತನ ಋಷಿಗೆ ಶ್ರೀರಂಗನಾಥಸ್ವಾಮಿ ದರ್ಶನ ನೀಡಿದ ರಂಗಜಯಂತಿ ಪ್ರಯುಕ್ತ ಮೈಸೂರಿನ ರಂಗಮುಡಿ ಸಮಿತಿಯಿಂದ ಹಮ್ಮಿಕೊಂಡಿದ್ದ ಉತ್ಸವದ ಹಿನ್ನೆಲೆಯಲ್ಲಿ ಶ್ರೀರಂಗನಾಥಸ್ವಾಮಿಯ ಸಾಲಿಗ್ರಾಮ ಮೂರ್ತಿಗೆ ವಿವಿಧ ಅಭಿಷೇಕ ನೆರವೇರಿಸಿ ಮಹಾಮಂಗಳಾರತಿ ಅರ್ಪಿಸಿ ವರ್ಷಕ್ಕೆ ಮೂರು ಬಾರಿ ಮಾತ್ರ ಸಿಗುವ ನಿಜಪಾದ ದರ್ಶನದೊಂದಿಗೆ ದೇವರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ಸಹಸ್ರಾರು ಜನರು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

ಗುರುವಾರ ಸಂಜೆ ಪಟ್ಟಣದ ಉಪ ಖಜಾನೆಯಿಂದ ತರಿಸಲಾದ ವಜ್ರ ಖಚಿತ ಚಿನ್ನದ ಕಿರೀಟವನ್ನು ರಂಗನಾಥಸ್ವಾಮಿಗೆ ಧಾರಣೆ ಮಾಡಿ ಪಲ್ಲಕ್ಕಿ ಮೇಲಿರಿಸಿದ ಬಳಿಕ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ, ಉತ್ತರಾಧಿ ಮಠ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಉತ್ಸವ ಸಾಗಿದ ಬೀದಿಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಉತ್ಸವಕ್ಕೆ ವೀರಗಾಸೆ ಸೇರಿದಂತೆ ಜಾನಪದ ಕಲಾತಂಡಗಳು ಮೆರುಗು ನೀಡಿದವು.

ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು.

ರಂಗಮುಡಿ ಉತ್ಸವಕ್ಕೆ ಕ್ಷೇತ್ರದ ಶಾಸಕರ ಪತ್ನಿ ಸುಮತಿ ರಮೇಶ್‌ ಬಂಡಿಸಿದ್ದೇಗೌಡ ಅವರ ಸಮ್ಮುಖದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಚಾಲನೆ ನೀಡಿದರು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್‌, ಸದಸ್ಯರಾದ ಆಶಾಲತಾ ಪುಟ್ಟೇಗೌಡ, ಕಮಲಮ್ಮ, ಗುರು ನಾಗೇಂದ್ರದತ್‌, ಸುಬ್ರಹ್ಮಣ್ಯ, ಸೇತುವೆ ಸತೀಶ್‌, ಆನಂದ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!