ಮದ್ದೂರು : ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್ ದಿವಾಸ್ ಕಾರ್ಯಕ್ರಮದಲ್ಲಿ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಮದ್ದೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ತಾಲೂಕಿನ ವಿವಿಧ ಹಿಂದೂ ಪರ ಸಂಘಟನೆಗಳ ವತಿಯಿಂದ ಸೋಮವಾರ ಸಂಜೆ ಬಲಿದಾನ್ ದಿವಸವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನಂತ್ ಕುಮಾರ್ ಹೆಗ್ಡೆ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರುಗಳು ಬಹಿರಂಗ ಸಭೆಯಲ್ಲಿ ರೋಷವೇಷದ ಮಾತುಗಳನ್ನು ಹೇಳಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಸೆಕ್ಷನ್ 196 (1)(A)BNS ಆಕ್ಟ್ ಪ್ರಕಾರ ನಗರದ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.




