ಮಂಡ್ಯ : ಅರ್ಹ ಸ್ಲಂ ನಿವಾಸಿಗಳಿಗೆ ವಸತಿ ಒದಗಿಸಲು ಅರ್ಹರಿರುವವರ ಪಟ್ಟಿ ನೀಡುವಂತೆ ಶಾಸಕ ಪಿ.ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ನೀಡಲು ಮಂಡ್ಯ ತಾಲ್ಲೂಕಿನಲ್ಲಿ 5 ರಿಂದ 10 ಎಕರೆ ಭೂಮಿ ಗುರುತಿಸುವಂತೆ ತಿಳಿಸಿದರು.
ಹೊಸ ತಮಿಳು ಕಾಲೋನಿ, ಹೊನ್ನಯ್ಯ ಬಡಾವಣೆ, ವಿವೇಕಾನಂದ ಬಡಾವಣೆ, ಕಾಳಪ್ಪ ಬಡಾವಣೆ, ಜಯರಾಂ ಲೇಔಟ್, ಆರ್.ಟಿ.ಒ ಸ್ಲಂ ನಲ್ಲಿರುವ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸ್ವಂತ ಹಾಸ್ಟಲ್ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ: ಕುಮಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಯಣ್ಣಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.





