ಮಂಡ್ಯ: ರಾಜ್ಯ ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಬುಧವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಬೃಂದಾವನದ ಬೋಟಿಂಗ್ ಪಾಯಿಂಟ್ ಬಳಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ರೈತ ಸಂಘ, ದಲಿತ, ಮಹಿಳಾ, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತರು, ಕೆಆರ್‌ಎಸ್ ವ್ಯಾಪ್ತಿಯ ಗ್ರಾಮಸ್ಥರು, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೊರಲ ವಿರೋಧವನ್ನೂ ಲೆಕ್ಕಿಸದೆ ಸರ್ಕಾರ ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಮಾಡೇ ಮಾಡುತ್ತೇವೆಂದು ದರ್ಪ, ದೌರ್ಜನ್ಯದ ರೀತಿಯಲ್ಲಿ ಮಾತನಾಡುತ್ತಿರುವುದರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿ ಹರಿಹರ ಪ್ರಿಯ ಮಾತನಾಡಿ, ಶಾಸಕ ಪಿ.ರವಿಕುಮಾರ್ ಅವರು ಕಾವೇರಿ ಆರತಿ, ಅಮ್ಯೂಸ್‌ಮೆಂಟ್ ಪಾರ್ಕ್ ಮಾಡೇ ಮಾಡುತ್ತೇವೆಂದು ಸವಾಲು ಹಾಕಿದ್ದಾರೆ. ರೈತರು ಎದ್ದರೆ ನಿಮಗೆ ಸರಿಯಾದ ಮಂಗಳಾರತಿ ಆಗುತ್ತೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು.ಅಲ್ಲದೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಿಎಂ, ಡಿಸಿಎಂ ಕಾರಣ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಸಹೋದರ ಸೋತಿದ್ದರಿಂದ ಡಿ.ಕೆ.ಶಿವಕುಮಾರ್‌ಗೆ ಹುಚ್ಚು ಬಂದಿದೆ. 30 ವರ್ಷಗಳ ಕಾಲ ರಜೆಯನ್ನೇ ಹಾಕದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಐಪಿಎಸ್ ಅಧಿಕಾರಿ ದಯಾನಂದ್ ಅವರನ್ನು ಅಮಾನತುಗೊಳಿಸಿದ್ದೀರಿ ಎಂದು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು.





