ಮಂಡ್ಯ: ಕಾವೇರಿ ಆರತಿ, ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗಳ ಬಗ್ಗೆ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ಖಂಡಿಸಿ ಪ್ರಗತಿಪರ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಯ ಮುಖಂಡರು, ಶಾಸಕ ರವಿ ಕುಮಾರ್ ಗಣಿಗ ಅವರು ಒತ್ತಡಗಳಿಂದ ವಿವೇಕವಿಲ್ಲದೆ, ಆಲೋಚನೆ ಇಲ್ಲದೆ ಮಾತನಾಡಿದ್ದಾರೆ. ಕಳೆದ ಜೂನ್.6ರಂದು ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸರ್ಕಾರದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರೈತ ಸಂಘಟನೆಗಳ, ಗ್ರಾಮಸ್ಥರ, ಸಾರ್ವಜನಿಕರ ಸಭೆಯಲ್ಲಿ ಸರ್ವಾನುಮತದಿಂದ ಯೋಜನೆಗಳನ್ನು ರದ್ದುಪಡಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಶಾಸಕರು ಮನವರಿಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಶಾಸಕರು ಅಧಿಕಾರದಿಂದ ಮಾತನಾಡುತ್ತಿದ್ದಾರೆ, ಕಾವೇರಿ ಆರತಿ, ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆಗಳು ಭವಿಷ್ಯದಲ್ಲಿ ಕೆಆರ್‌ಎಸ್ ಅಣೆಕಟ್ಟು, ಅಚ್ಚುಕಟ್ಟು ಪ್ರದೇಶಗಳು, ರೈತರು ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ನಿರ್ಧಾರಗಳನ್ನು ಉಲ್ಲಂಘನೆ ಮಾಡಿದ್ದಾರೆ. ಇದು ಶಾಸಕರಿಗೆ ಶೋಭೆ ತರುವುದಿಲ್ಲ. ಅಣೆಕಟ್ಟು, ನದಿ ಪ್ರದೇಶಗಳು, ಪ್ರವಾಸೋದ್ಯಮದ ಕೇಂದ್ರಗಳಲ್ಲ, ನಿಷೇಧಿತ ಪ್ರದೇಶಗಳಾಗಿವೆ ಎಂದರು. ನಂತರ ಕೆಆರ್‌ಎಸ್‌ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಗೆ ಪ್ರಯಾಣ ಬೆಳೆಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಸುನಂದ ಜಯರಾಂ, ಕೆ.ಬೋರಯ್ಯ, ನಾಗಣ್ಣಗೌಡ, ಹೆಚ್.ಡಿ.ಜಯರಾಂ, ಎಸ್.ನಾರಾಯಣ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.





