ಮಂಡ್ಯ: ಕುಡಿಯುವ ನೀರಿನ ಗುಣಮಟ್ಟವು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸುರಕ್ಷಿತ, ಶುದ್ಧ ಮತ್ತು ರಾಸಾಯನಿಕ ಮುಕ್ತ ನೀರನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಸಾರ್ವಜನಿಕರಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಗುಣಮಟ್ಟಕ್ಕೆ ಆದ್ಯತೆ ನೀಡಿ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಪೈಪ್‌ಲೈನ್ ಸಾಗುವ ಮಾರ್ಗದಲ್ಲಿ ಒಳಚರಂಡಿ ನೀರು ಸೋರಿಕೆಯಾಗದಂತೆ ಕುಡಿಯುವ ನೀರಿನಲ್ಲಿ ಮಿಶ್ರಣವಾಗದಂತೆ ನೋಡಿಕೊಳ್ಳುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇನ್ನು ಬೀದಿ ನಾಯಿಗಳಿಗೆ ಆಹಾರ ನೀಡಲು ಸೂಕ್ತ ಸ್ಥಳ ಗುರುತಿಸಿ ಸದರಿ ಸ್ಥಳದಲ್ಲಿಯೇ ಸಾರ್ವಜನಿಕರು ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಅರಿವು ಮೂಡಿಸಬೇಕು. ಹೋಟೆಲ್ ಹಾಗೂ ಹಾಸ್ಟೆಲ್‌ನಲ್ಲಿ ಉಳಿದ ಆಹಾರವನ್ನು ಗುರುತಿಸಿದ ಸ್ಥಳದಲ್ಲಿಯೇ ಹಾಕುವಂತೆ ಜಾಗೃತಿ ಮೂಡಿಸಿ ಎಂದು ಹೇಳಿದರು.





