ಶ್ರೀರಂಗಪಟ್ಟಣ : ಕಿಲ್ಕಾರಿಯು ಗರ್ಭಿಣಿ, ಬಾಣಂತಿಯರಿಗೆ ಅನುಕೂಲವಾಗುವ ಮೊಬೈಲ್ ಆಧಾರಿತ ಉಚಿತ ಆರೋಗ್ಯ ಸೇವೆಯಾಗಿದ್ದು, ಗರ್ಭಿಣಿ,ಬಾಣಂತಿಯರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.
ತಾಲ್ಲೂಕಿನ ಬೆಳಗೊಳ ಗ್ರಾಮದ ಹಿರಿದೇವಿ ಬಡಾವಣೆಯ 3 ನೇಯ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗರ್ಭಿಣಿ, ಬಾಣಂತಿಯರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗಿರುವ ಕಿಲ್ಕಾರಿ ಮೊಬೈಲ್ ಕರೆ ಸೇವೆ ಗರ್ಭಿಣಿಯರಿಗೆ ಗರ್ಭಧಾರಣೆ, ಹೆರಿಗೆ ಮತ್ತು ಮಕ್ಕಳ ಆರೈಕೆ ಬಗ್ಗೆ ಶಿಕ್ಷಣ ನೀಡಲು ಮೊಬೈಲ್ ಆಧಾರಿತ ಸೇವೆಯಾಗಿದೆ. ತಾಯಂದಿರು ಗರ್ಭಾವಸ್ಥೆಯಲ್ಲಿ ಮತ್ತು ಶೈಶಾವಸ್ಥೆಯಲ್ಲಿ ಅನುಸರಿಸಬೇಕಾದ ನಡಾವಳಿಗಳು ಮತ್ತು ಅಭ್ಯಾಸಗಳ ಬಗ್ಗೆ ತಿಳಿಸುವಂತದ್ದಾಗಿರುತ್ತದೆ ಎಂದು ತಿಳಿಸಿದರು.
ಅರೋಗ್ಯದ ಬಗ್ಗೆ ಮಾಹಿತಿಯನ್ನು ನೇರವಾಗಿ ಕುಟುಂಬಗಳ ಮೊಬೈಲ್ ಫೋನ್ ಗಳಿಗೆ ತಲುಪಿಸುವ ಭಾರತ ಸರ್ಕಾರದ ಉಚಿತ ಮೊಬೈಲ್ ಸೇವೆ ಆಗಿದೆ ಆದ್ದರಿಂದ ಗರ್ಭಿಣಿ, ಬಾಣಂತಿಯರು ಕಿಲ್ಕಾರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇಳೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ.ಟಿ.ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ಸುನಿತಾ, ಆಶಾ ಕಾರ್ಯಕರ್ತೆ ಜಯಂತಿ, ಸಾವಿತ್ರಿ ಹಾಗೂ ಗರ್ಭಿಣಿಯರು, ಬಾಣಂತಿಯರು,ಮಕ್ಕಳ ತಾಯಂದಿರರು ಉಪಸ್ಥಿತರಿದ್ದರು.





