Mysore
20
overcast clouds
Light
Dark

ಅಗತ್ಯ ಸೇವಾ ವಲಯದವರಿಗೆ ಏಪ್ರಿಲ್ 19, 20 ಹಾಗೂ 21 ರಂದು ಅಂಚೆ ಮತದಾನ: ಡಾ: ಕುಮಾರ

ಮಂಡ್ಯ : ಲೋಕಸಭಾ ಸಾರ್ವತ್ರಿಕ ಚುನಾವಣೆ 2024. ರ ಅಂಗವಾಗಿ ಈಗಾಗಲೇ ಗುರುತಿಸಲಾಗಿರುವ ಅಗತ್ಯ ಸೇವಾ ವಲಯದ ಮತದಾರರಿಗೆ ಮಂಡ್ಯ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಏಪ್ರಿಲ್ 19, 20 ಹಾಗೂ 21 ರಂದು ಅಂಚೆ ಮತದಾನ ಕೇಂದ್ರವನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೋಸ್ಟಲ್ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಭಾರತ ಚುನಾವಣಾ ಆಯೋಗ ಪೊಲೀಸ್, ಅಗ್ನಿಶಾಮಕ ಇಲಾಖೆ, ಸಾರಿಗೆ, ಚೆಸ್ಕಾಂ ಸೇರಿದಂತೆ 11 ವಲಯಗಳನ್ನು ಅಗತ್ಯ ಸೇವಾ ವಲಯ ಎಂದು ಗುರುತಿಸಲಾಗಿದ್ದು, ಅವರಿಗೆ 12 ಡಿ ಯನ್ನು ವಿತರಿಸಲಾಗಿದೆ ಎಂದರು.

ಒಟ್ಟು 1022 ಜನರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ : ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಾಗಿ ಮಂಡ್ಯದಲ್ಲೇ ಕಾರ್ಯನಿರ್ವಹಿಸುತ್ತಿರುವ 501 ಮತದಾರರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಾಗಿ ಬೇರೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 521 ಮತದಾರರು 12 ಡಿ ಮೂಲಕ ಪೋಸ್ಟಲ್ ಬ್ಯಾಲೆಟ್ ನಲ್ಲಿ ಮತದಾನ ಮಾಡಲು ಒಪ್ಪಿಗೆ ನೀಡಿದ್ದು ಒಟ್ಟು 1022 ಜನರು ಏಪ್ರಿಲ್ 19, 20 ಹಾಗೂ 21 ರಂದು ಬೆಳಿಗ್ಗೆ 9 ರಿಂದ 5 ರವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.

ಪೋಸ್ಟಲ್ ನೋಡಲ್ ಅಧಿಕಾರಿಗಳು ತಮ್ಮ ವಲಯದ ವ್ಯಾಪ್ತಿಯ ಮತದಾರರಿಗೆ ಮಾಹಿತಿ ನೀಡಿ ಮತದಾನ ಮಾಡುವಂತೆ ತಿಳಿಸಿ. ಜಿಲ್ಲಾಧಿಕಾರಿಗಳ ಕಚೇರಿಯಿಂದಲೂ ಸಹ ಎಲ್ಲರಿಗೂ ಎಸ್.ಎಂ.ಎಸ್ ಮೂಲಕ ಮತದಾನದ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಸಹ ಕಳುಹಿಸಿಕೊಡಲಾಗುವುದು ಎಂದರು.

ಅಂಚೆ ಮತದಾನವನ್ನು 12 ಡಿ ಮೂಲಕ‌ ಆಯ್ಕೆ ಮಾಡಿರುವ ಮತದಾರರು ನಿಗದಿತ ದಿನದಂದು ಮತದಾನ ಮಾಡಿ. ಇವರಿಗೆ ಏಪ್ರಿಲ್ 26 ರಂದು ಇ.ವಿ.ಎಂ. ಮೂಲಕ‌ ಮತದಾನ ಮಾಡಲು ಅವಕಾಶವಿರುವುದಿಲ್ಲ. ಈ ವಿಷಯವನ್ನು ನೋಡಲ್ ಅಧಿಕಾರಿಗಳು ತಪ್ಪದೇ ಮತದಾರರಿಗೆ ತಿಳಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಪುರಸಭೆ ತಹಶೀಲ್ದಾರ್ ರವಿಶಂಕರ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ‌ ನಿರ್ಮಲ ಎಸ್.ಹೆಚ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.