Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಸಾರ್ವಜನಿಕರ ನೆಮ್ಮದಿಗೆ ಪೊಲೀಸ್ ಇಲಾಖೆ ಕಾರಣ: ಡಾ.ಕುಮಾರ

ಮಂಡ್ಯ: ಸಮಾಜದಲ್ಲಿ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಶಾಂತಿ, ಸುಖದಿಂದ ಬದುಕಲು ಕಾರಣ ಪೊಲೀಸ್ ಇಲಾಖೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಇಂದು ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ ಮ್ಯಾರಥಾನ್’ ಓಟಕ್ಕೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದರು.

ಕರ್ನಾಟಕ ಪೊಲೀಸ್ ಇಲಾಖೆ 50 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು. ಶಿಸ್ತಿನ ಪ್ರತೀಕವಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತದೆ. ಸಾಮಾಜದ ಸ್ವಾಸ್ಥ್ಯವನ್ನು ಪೊಲೀಸ್ ಇಲಾಖೆ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ, ನಾವೆಲ್ಲರೂ ಪೊಲೀಸ್ ಇಲಾಖೆಯ ಕಾರ್ಯವನ್ನು ಪ್ರಶಂಸಿಸಬೇಕು ಎಂದು ಹೇಳಿದರು.

ಮನಸ್ಸು ಮತ್ತು ದೇಹ ಆರೋಗ್ಯಕರವಾಗಿದ್ದರೆ ಸದೃಢವಾಗಿ ಕೆಲಸ ನಿರ್ವಹಿಸಬಹುದು, ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡು ಸದೃಢರಾಗಲು ದೇಹವನ್ನು ದಂಡಿಸಬೇಕು ಎಂದು ಮ್ಯಾರಥಾನ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ಶಭಾಶಯಗಳನ್ನು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ನಮ್ಮ ಆರೋಗ್ಯ ಸೀಮಿತದಲ್ಲಿ ಇರಬೇಕೆಂದರೆ ಪ್ರತಿಯೊಬ್ಬರೂ ಸಧೃಡರಾಗಿ ಇರಬೇಕು. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದನ್ನು ಸತತವಾಗಿ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಈ ಮ್ಯಾರಥಾನ್ ಓಟದ ಮೂಲ ಉದ್ದೇಶ “ನಶೆ ಮುಕ್ತ ಕರ್ನಾಟಕ” ಅಭಿಯಾನ ಮಾಡುವುದು, ಹಾಗಾಗಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ರಿಷಿ, ಬಿಗ್ ಬಾಸ್ ಖ್ಯಾತಿಯ ರಜತ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಗಣ್ಯರಾದ ವೆಂಕಟಗಿರಿಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!