ಪಾಂಡವಪುರ : ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರ ಸಲ್ಲಿಸಿದ್ದ ಅರ್ಜಿಗೆ 30 ದಿನದೊಳಗೆ ಮಾಹಿತಿ ನೀಡದ ಇಲ್ಲಿನ ತಹಶೀಲ್ದಾರ್ ಎಸ್.ಸಂತೋಷ್ ಅವರಿಗೆ ಕರ್ನಾಟಕ ಮಾಹಿತಿ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.
ತಹಶೀಲ್ದಾರ್ ಅವರಿಂದ ದಂಡದ ಮೊತ್ತವನ್ನು ಮುಂದಿನ ತಿಂಗಳ ಸಂಬಳದಲ್ಲಿ ಒಂದೇ ಕಂತಿನಲ್ಲಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ ವರದಿ ಸಲ್ಲಿಸಿ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್ ಶ್ರೀನಿವಾಸ್ ಅವರಿಗೆ ಆಯೋಗವು ಸೂಚಿಸಿದೆ.
ಅಷ್ಟೆ ಅಲ್ಲದೇ ಅರ್ಜಿದಾರನಿಗೆ ಮಾಹತಿ ನೀಡಲು 240ಕ್ಕೂ ಹೆಚ್ಚು ದಿನ ವಿಳಂಬವಾಗಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಆಯೋಗ, ಕಷ್ಟ ಇತರೆ ವೆಚ್ಚಗಳಿಗಾಗಿ ಆರ್ಜಿದಾರನಿಗೆ 10 ಸಾವಿರ ರೂ ಪರಿಹಾರವನ್ನು 15 ದಿನದೊಳಗೆ ನೀಡುವಂತೆ ಆದೇಶಿಸಿದೆ. ತಪ್ಪಿದಲ್ಲಿ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಏ 9 ರಂದು ಬೆಳಿಗ್ಗೆ 11ಕ್ಕೆ ನಿಗದಿ ಮಾಡಿರುವ ಆಯೋಗವು, ಆ ದಿನ ಖುದ್ದು ಹಾಜರಾಗುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದೆ.





