ಪಾಂಡವಪುರ: ಗೃಹಿಣಿಯೊಬ್ಬರು ತನ್ನ ಎರಡು ಮಕ್ಕಳೊಂದಿಗೆ ನಾಲೆಗೆ ಬಿದ್ದು ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಟ್ಟಣದ ಹಾರೋಹಳ್ಳಿ ಗ್ರಾಮದ ನಿವಾಸಿ ಧನಂಜಯ್ ಎಂಬವರ ಪತ್ನಿ ವಿದ್ಯಾ (೩೦) ಬದುಕುಳಿದಿದ್ದು, ತಮ್ಮ ಇಬ್ಬರು ಮಕ್ಕಳಾದ ಲಿತಿಷ(೮), ಕಿಶನ್(೨) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮಕ್ಕಳ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಹಾರೋಹಳ್ಳಿ ಗ್ರಾಮದ ನಿವಾಸಿ ಧನಂಜಯ್ ಅವರು ಖಾಸಗಿ ಫೈನಾನ್ಸ್ ಕಂಪೆನಿಯೊಂದರಲ್ಲಿ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಧನಂಜಯ್ ಅವರ ಪತ್ನಿ ವಿದ್ಯಾ ಅವರು ತನ್ನ ಇಬ್ಬರು ಮಕ್ಕಳೊಂದಿಗೆ ತಾಲ್ಲೂಕಿನ ಬನಘಟ್ಟ ಗೇಟ್ ಸಮೀಪದ ವಿ.ನಾಲೆಯ ಬಳಿ ತೆರಳಿದ್ದಾರೆ. ಬೈಕ್ ಮತ್ತು ಮೊಬೈಲ್ ನ್ನು ನಾಲೆಯ ಏರಿಯ ಮೇಲೆ ನಿಲ್ಲಿಸಿ ವಿ.ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿದ್ಯಾ ಅವರು ನಾಲೆಯಲ್ಲಿ ಮುಳುಗುತ್ತಿದ್ದನ್ನು ಕಂಡ ಸ್ಥಳೀಯರು ನಾಲೆಗೆ ಹಾರಿ ವಿದ್ಯಳನ್ನು ರಕ್ಷಿಸಿದ್ದಾರೆ, ತಮ್ಮ ಇಬ್ಬರು ಮಕ್ಕಳು ನಾಲೆಯ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ವಿದ್ಯಾ, ನಾನು ಮತ್ತು ಮಕ್ಕಳು ನಾಲೆಯ ಏರಿಯ ಮೇಲೆ ಸೆಲಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಸೆಲಿ ತೆಗೆದುಕೊಳ್ಳುವುದಕ್ಕಾಗಿ ಹಾರೋಹಳ್ಳಿಯಿಂದ ಬನಘಟ್ಟ ಬಳಿ ಏಕೆ ಹೋಗಿದ್ದರು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವಿದ್ಯಾ ಬಳಸುತ್ತಿದ್ದ ಬೈಕ್ ಮತ್ತು ಮೊಬೈಲ್ ಎರಡನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿ.ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಮಕ್ಕಳ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.
ಆಕ್ರಂಧನ: ಪುಟಾಣಿ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಮನೆಯಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ. ಪೋಷಕರ ಗೋಳಾಟ ಮನಕಲುಕುವಂತಿತ್ತು.





