ಮಂಡ್ಯ: ಇತ್ತೀಚೆಗೆ ಬಂಡೂರು ತಳಿಯ ಟಗರುಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ತಾಜ ಉದಾಹರಣೆ ಎಂಬಂತೆ ಇಲ್ಲೊಂದು ಗ್ರಾಮದಲ್ಲಿ ದಾಖಲೆಯ ಬೆಲೆಗೆ ಬಂಡೂರು ತಳಿಯ ಜೋಡಿ ಟಗರು ಮಾರಾಟವಾಗಿದೆ.
ನಾವೆಲ್ಲಾ ಸಹಜವಾಗಿ ಕುರಿ ಅಂದ್ರೆ ಸುಮಾರು 15 ರಿಂದ 20 ಸಾವಿರ ರೂ ಬೆಲೆ ಅಂದುಕೊಳ್ತಿವಿ. ಆದ್ರೆ ಈಗ ಆಗಲ್ಲ, ಬಂಡೂರು ತಳಿಯ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬಂಡೂರು ತಳಿಯ ಕುರಿಗಳನ್ನು ಲಕ್ಷ ಲಕ್ಷ ಹಣ ಕೊಟ್ಟು ಖರೀದಿ ಮಾಡ್ತಿದ್ದಾರೆ. ಈಗ ಇಂತಹದ್ದೊಂದು ಪ್ರಸಂಗ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಉಲ್ಲಾಸ್ ಗೌಡ ಎಂಬ ಯುವಕ ಸಾಕಿದ ಬಂಡೂರು ತಳಿಯ ಜೋಡಿ ಟಗರು ಬರೋಬ್ಬರಿ 1.60 ಲಕ್ಷಕ್ಕೆ ಮಾರಾಟವಾಗಿದೆ.
ವಿದ್ಯಾರ್ಥಿಯಾಗಿರುವ ಉಲ್ಲಾಸ್ ಬಂಡೂರು ತಳಿಯ ಕುರಿಗಳು ನಶಿಸಬಾರದು ಎಂಬ ನಿಟ್ಟಿನಲ್ಲಿ ಬಂಡೂರು ತಳಿಯ ಕುರಿಗಳನ್ನು ಸಾಕಾಣಿ ಮಾಡುತ್ತಿದ್ದಾನೆ. ಹೀಗಾಗಿ ಉಲ್ಲಾಸ್ ಬಳಿ ವಡ್ಡರಹಳ್ಳಿ ಗ್ರಾಮದ ರೈತರಾದ ಕುಮಾರ್ ಹಾಗೂ ಕುಳ್ಳೇಗೌಡ ದುಬಾರಿ ಹಣ ಕೊಟ್ಟು ಜೋಡಿ ಟಗರುಗಳನ್ನು ಖರೀದಿಸಿದ್ದಾರೆ.
ಇನ್ನು ಟಗರು ಖರೀದಿ ಬಳಿಕ ಗ್ರಾಮದಲ್ಲಿ ಟಗರುಗಳನ್ನು ಮೆರವಣಿಗೆ ಮಾಡಿ ಖರೀದಿ ಮಾಡಿದ ರೈತರಿಗೆ ಅಭಿನಂದನೆ ಸಲ್ಲಿಸಿ ಟಗರುಗಳನ್ನು ಹಸ್ತಾಂತರ ಮಾಡಲಾಗಿದೆ. ಈ ಹಿಂದೆ ಉಲ್ಲಾಸ್ ಅವರ ಕುಟುಂಬದವರು ಇದೇ ರೀತಿ ಬಂಡೂರು ಕುರಿಗಳನ್ನು ಸಾಕಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದರು. ಈಗ ಉಲ್ಲಾಸ್ ಕೂಡ ದುಬಾರಿ ಬೆಲೆಗೆ ಜೋಡಿ ಟಗರು ಮಾರಾಟ ಮಾಡುವ ಮೂಲಕ ಮತ್ತಷ್ಟು ಕುರಿಗಳ ಸಾಕಾಣೆ ಮಾಡುವ ವಿಶ್ವಾಸ ಹೊಂದಿದ್ದಾರೆ.





