Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶದ ವಿರುದ್ಧ ಮಂಡ್ಯದಲ್ಲಿ ಅಕ್ರೋಶ : ರೈತರಿಂದ ರಸ್ತೆ ತಡೆ

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂ ಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮಾಡಿದ ಬೆನ್ನಲ್ಲೇ ಮಂಡ್ಯದಲ್ಲಿ ರೈತರ ಆಕ್ರೋಶದ ಕಟ್ಟೆ ಹೊಡೆದಿದೆ.

ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಪ್ರಾಧಿಕಾರದ ಆದೇಶವನ್ನು ವಿರೋಧಿಸಿದ್ದು. ರೈತರು ಬೆಂಗಳೂರು ಮೈಸೂರು ಹೆದ್ದಾರಿಗಿಳಿದು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್ ಎಂ ವಿ ಪ್ರತಿಮೆ ಎದುರು ರೈತ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ನಿರಂತರ ಧರಣಿ ನಿರತರಾಗಿರುವ ರೈತರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು.

ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿ ಖುದ್ದು ಹಾಜರಾಗಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟಿಲ್ಲ, ರಾಜ್ಯ ಸರ್ಕಾರ ತನ್ನ ಹೊಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ರೈತರಿಗೆ ನಿರಂತರವಾಗಿ ದ್ರೋಹ ಮಾಡುತ್ತಾ ಬಂದಿದೆ ಎಂದು ಆಕ್ರೋಶಿಸಿದರು.

ಆಗಸ್ಟ್ ತಿಂಗಳಿನಲ್ಲಿ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರ ಮತ್ತೆ ನೀರು ಬಿಡಲಾಗಿದೆ, ಇದರಿಂದ ಕಾವೇರಿಕೊಳ್ಳದ ಜಲಾಶಯಗಳು ಬರಿದಾಗಿವೆ, ಕೃಷ್ಣರಾಜಸಾಗರದಲ್ಲಿ ನೀರಿನ ಮಟ್ಟ 96 ಅಡಿಗೆ ಕುಸಿದಿದೆ, ಬೆಳೆ ರಕ್ಷಣೆಗೆ ನೀರಂತೂ ಇಲ್ಲ,ಕುಡಿಯುವ ನೀರು ಸಹ ಇಲ್ಲದಂತಾಗಲಿದೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು.

ಕಾವೇರಿ ನದಿ ನೀರು ಪ್ರಾಧಿಕಾರ ವಾಸ್ತವ ಸ್ಥಿತಿ ಅರಿಯದೆ, ಕಾವೇರಿ ಕೊಳ್ಳದ ಜಲಾಶಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸದೆ ನೀರು ಹರಿಸಿ ಎಂದು ಹೇಳುತ್ತಿರುವುದು ಅವೈಜ್ಞಾನಿಕ, ಎರಡು ರಾಜ್ಯಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತಿರುವ ಕೇಂದ್ರ ಸರ್ಕಾರ ಈ ಕೂಡಲೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಾಧಿಕಾರದ ಆದೇಶ ಕುರಿತಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸರ್ಕಾರದ ನಿಲುವು ಪ್ರಕಟಿಸಬೇಕು, ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಬಾರದು ಎಂದರು.

ಕಾವೇರಿ ವಿಚಾರದಲ್ಲಿ ರೈತರಿಗೆ ನಿರಂತರ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ಹೋರಾಟ ಮಾಡಿಕೊಂಡು ಬಂದಿರುವ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮುಂದಿನ ಹೋರಾಟದ ರೂಪರೇಷೆ ಕುರಿತಂತೆ ನಾಳೆ ( ಮಂಗಳವಾರ ) ಬೆಳಗ್ಗೆ 10 ಗಂಟೆಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು

ರೈತ ಹಿತರಕ್ಷಣ ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇ ಗೌಡ ನೇತೃತ್ವ ವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ