ಹಾರೋಹಳ್ಳಿ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದ್ದು, ಈ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಚುನಾವಣ ನಡೆಯಲಿದೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ್ ಸ್ಪರ್ಧಿಸುತ್ತಿದ್ದು, ಎದುರಾಳಿಯಾಗಿ ಬಿಜೆಪಿಯಿಂದ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿದಿದ್ದಾರೆ.
ಇಬ್ಬರ ನಡುವೆ ಜಿದ್ದಾಜಿದ್ದಿ ಏರ್ಪಡುವ ಭಾರೀ ನಿರೀಕ್ಷೆಯಿದ್ದು, ಗೆಲುವಿಗಾಗಿ ಭರ್ಜರಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಈ ಬಾರಿ ರಾಜ್ಯ ಬಿಜೆಪಿ ಜತೆ ಲೋಕಸಭೆಗಾಗಿ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ಹಿರಿಯ ಹೆಚ್‌ಡಿ ದೇವೇಗೌಡ ಅವರು ಹಾರೋಹಳ್ಳಿಯಲ್ಲಿ ಮಂಜುನಾಥ್ ಪರ ಮತಯಾಚನೆ ಮಾಡಿದ್ದಾರೆ.
ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಸಹ ಮಾತನಾಡಿದ ದೇವೇಗೌಡ ನರೇಂದ್ರ ಮೋದಿ ಬಿಟ್ಟರೆ ಬೇರೆ ಯಾರಿಗೂ ಈ ದೇಶದ ಪ್ರಧಾನ ಮಂತ್ರಿಯಾಗುವ ಯೋಗ್ಯತೆಯಿಲ್ಲ ಎಂದು ಹೇಳಿಕೆ ನೀಡಿದರು.
ಈ ಕ್ಷೇತ್ರದಲ್ಲಿ ಅವರಿಗೆ ( ಡಿಕೆ ಸಹೋದರರು ) ಸೆಡ್ಡು ಹೊಡೆಯಬೇಕು, ಯಾರಿಗೂ ಹೆದರಬೇಡಿ, ಅವರ ಹೆಸರು ಹೇಳುವುದಿಲ್ಲ. ಈ ಬಾರಿ ಅವರ ಅಂತ್ಯವಾಗಲೇಬೇಕು ಎಂಬ ಮೋದಿ ಹಾಗೂ ಅಮಿತ್ ಶಾ ಒತ್ತಾಯದ ಮೇರೆಗೆ ಮಂಜುನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಹೀಗಾಗಿ ಅವರನ್ನು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿಕೊಂಡರು.