Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಾಗಮಂಗಲ: ಗಣೇಶ ವಿಸರ್ಜನೆ ವೇಳೆ ಘರ್ಷಣೆ, ಪೋಲಿಸ್‌ ಠಾಣೆ ಪ್ರತಿಭಟನೆ

ನಾಗಮಂಗಲ: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಬುಧವಾರ(ಸೆ.11) ರಾತ್ರಿ ಎರಡು ಕೋಮುಗಳ ಯುವಕರ ನಡುವೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಇಡೀ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತವಾರಣ ನಿರ್ಮಾಣವಾಗಿದೆ.

ಪಟ್ಟಣದ ಬದರಿ ಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಉತ್ಸವವು ಮೈಸೂರು ರಸ್ತೆಗೆ ಆಗಮಿಸುತ್ತಿದ್ದಂತೆ ಒಂದು ಕೋಮಿನ ಯುವಕರು ಗಣಪತಿ ಉತ್ಸವದ ಮೆರವಣಿಗೆಯಲ್ಲಿದ್ದ ಮತ್ತೊಂದು ಕೋಮಿನ ಯುವಕರ ಮೇಲೆ ಕಲ್ಲು ತೂರಿದ್ದ ಆರೋಪ ಕೇಳಿ ಬಂದಿದೆ.

ಈ ವೇಳೆ ಎರಡೂ ಗುಂಪುಗಳ ನಡುವೆ ಜಗಳ ತಾರಕಕ್ಕೇರಿ, ತಳ್ಳಾಟ,ನೂಕಾಟ ನಡೆದಿದೆ. ಈ ವೇಳೆ ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಆದರೂ ಎರಡು ಗುಂಪುಗಳು ಸ್ಥಳದಿಂದ ಚದುರಲಿಲ್ಲ. ಒಂದು ಕೋಮಿನ ಯುವಕರು ಮೈಸೂರು ರಸ್ತೆಯಲ್ಲಿ ನಿಂತು ಘೋಷಣೆ ಕೂಗಿದರೆ, ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪಿನ ಯುವಕರು ಘೋಷಣೆ ಕೂಗಿದರು.

ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದ ಕಾರಣ ಗಲಾಟೆಯನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಮಂಡ್ಯ ಸರ್ಕಲ್ ಮತ್ತು ಟಿ.ಮರಿಯಪ್ಪ ಸರ್ಕಲ್‌ನಲ್ಲಿ ಬಾಟಲಿಗಳು, ಕಲ್ಲುಗಳ ತೂರಾಟ ನಡೆಯಿತು. ಇದರಿಂದಾಗಿ ಜನಸಾಮಾನ್ಯರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದರು. ಎರಡು ಗುಂಪುಗಳು ಪೊಲೀಸರಿಗೂ ಹೆದರದೆ ರಾತ್ರಿ ೯.೩೦ ಗಂಟೆಯಾದರೂ ಪರಸ್ಪರ ಕೂಗಾಟ ನಡೆಸುತ್ತಿದ್ದರು. ಇದರಿಂದಾಗಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ ವಾತಾವರಣ ಸೃಷ್ಟಿಯಾಗಿತ್ತು.

ಬದರಿಕೊಪ್ಪಲಿನ ಯುವಕರು ಗಣಪತಿ ಮೂರ್ತಿಯನ್ನು ಪೊಲೀಸ್ ಠಾಣೆ ಮತ್ತು ಟಿ.ಮರಿಯಪ್ಪ ಸರ್ಕಲ್‌ನಲ್ಲಿ ನಿಲ್ಲಿಸಿ, ಘೋಷಣೆ ಕೂಗಿದರು. ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಲು ಹಲವು ಬಾರಿ ಲಾಠಿ ಪ್ರಹಾರ ನಡೆಸಿದರೂ ಘರ್ಷಣೆಯನ್ನು ತಹಬದಿಗೆ ತರಲು ಸಾಧ್ಯವಾಗಲಿಲ್ಲ.

ಘಟನೆ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹೆಚ್ಚಿನ ಪೊಲೀಸರು ಆಗಮಿಸಿದರೂ ಗಲಾಟೆ ಹತೋಟಿಗೆ ತರಲು ಶ್ರಮಿಸುತ್ತಿದ್ದಾರೆ. ರಾತ್ರಿ ಸಮಯವಾಗಿರುವುದರಿಂದ ಗುಂಪುಗಳು ಎಲ್ಲಿ ಎಲ್ಲಿ ನಿಂತು ಕಲ್ಲು ಮತ್ತು ಬಾಟಲಿಗಳನ್ನು ಎಸೆಯುತ್ತಿದ್ದಾರೆ ಎಂಬುದೂ ಗೊತ್ತಾಗುತ್ತಿಲ್ಲ. ಇದರಿಂದಾಗಿ ಮಂಡ್ಯ ರಸ್ತೆ ಮತ್ತು ಮೈಸೂರು ರಸ್ತೆ , ತುಮಕೂರು ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ.

ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗಲಾಟೆ ನಡೆದಿತ್ತು. ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಆಗಿತ್ತು. ಈ ಬಾರಿ ಕಲ್ಲೆಸೆತ ನಡೆದಿದ್ದು, ನಾಗಮಂಗಲ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: