Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಂಡ್ಯ ಜಿಲ್ಲೆ ರಾಜ್ಯ ರಾಜಕಾರಣಕ್ಕೆ ಅನೇಕ ನಾಯಕರನ್ನು ನೀಡಿದೆ: ಸಚಿವ ಚಲುವರಾಯಸ್ವಾಮಿ

n chaluvarayaswamy speech on maddur congress event

ಮಂಡ್ಯ :  ಜಿಲ್ಲೆ ರಾಜ್ಯ ರಾಜಕಾರಣಕ್ಕೆ ಅನೇಕ ನಾಯಕರನ್ನು ನೀಡಿದೆ. ಅವರೆಲ್ಲ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಹೇಳಿದರು.

ಅವರು ಇಂದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ಕಳೆದ 2 ವರ್ಷದಿಂದ ಈ ಭಾಗದ ಶಾಸಕ ಉದಯ್ ರವರು ಸರ್ಕಾರದೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡು ಮದ್ದೂರು ತಾಲೂಕಿಗೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ, ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕವಾಗಿ ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ಸ್ವಾವಲಂಬಿಯಾಗಿ ಮಾಡಿದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸುಮಾರು 4 ರಿಂದ 5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ 112 ಕೋಟಿ ಅನುದಾನ ನೀಡಲಾಗಿದೆ, 6.70 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ನೀಡಬೇಕಿದ್ದ ಕೇಂದ್ರ ಸರ್ಕಾರ 5.27 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ನೀಡಿದೆ ಎಂದು ತಿಳಿಸಿದರು.

ಇಂದು ರಸಗೊಬ್ಬರ ಸಮಸ್ಯೆ ಉದ್ಭವಿಸಿರುವ ಎಲ್ಲಾ ಜಿಲ್ಲೆಗಳಿಗೂ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ನೀಡಲಾಗಿದೆ, ವಿಪಕ್ಷ ನಾಯಕರಿಗೆ ರೈತರ ಮೇಲೆ ಕಾಳಜಿ ಇದ್ದರೆ ಕೇಂದ್ರ ಮಂತ್ರಿಗಳು ಜೋತೆ ಮಾತನಾಡಿ 2 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕೊಡಿಸಿ ಎಂದರು.

ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಮೈಶುಗರ್ ಕಾರ್ಖಾನೆ ಗೆ ವಿಶೇಷ ಅನುದಾನ ನೀಡಲಾಗಿದೆ, ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಕೊಡುಗೆಯನ್ನು ರಾಜ್ಯ ಸರ್ಕಾರ ನೀಡಿದೆ. ರಾಜ್ಯದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಮೆಕ್ಕೆಜೋಳದ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಅಣೆಕಟ್ಟೆ ಭರ್ತಿಯಾಗಿ ಬಿತ್ತನೆ ಕಾರ್ಯ ಕಾಲಕ್ಕೂ ಮುಂಚಿತವಾಗಿ ಪ್ರಾರಂಭವಾಗಿರುವ ಹಿನ್ನೆಲೆ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ರೈತರು ಆಂತಕ ಪಡುವ ಅಗತ್ಯವಿಲ್ಲ, ಬಿತ್ತನೆ ಅಗತ್ಯವಿರುವ ಯಾವುದೇ ಬಿತ್ತನೆ ಬೀಜ ರಸಗೊಬ್ಬರವನ್ನು ಸರಬರಾಜು ಮಾಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ನಂತರ ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಮಾತನಾಡಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ನಿಜವಾಗಿಯೂ ಮದ್ದೂರನ್ನು ಅಭಿವೃದ್ಧಿಯತ್ತಕೊಂಡ್ಯುತ್ತಿದ್ದಾರೆ, ಅನೇಕ ವರ್ಷಗಳಿಂದ ಬೇಡಿಕೆ ಇದ್ದ ಕೆಮ್ಮಣ್ಣು ನಾಲೆ, ಸೂಳೆಕೆರೆ ಅಭಿವೃದ್ಧಿ ಕ್ರಮವಾಹಿಸಲಾಗಿದೆ ಎಂದು ಹೇಳಿದರು.

ಮದ್ದೂರು ನಗರ ಪ್ರದೇಶದಲ್ಲಿ ವಿದ್ಯುತ್ ಕೊರತೆ ನೀಗಿಸಲು ಸೋಮನಹಳ್ಳಿಯಲ್ಲಿ 220 ಕೆ.ವಿ ಸಾಮರ್ಥ್ಯದ 187 ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಮದ್ದೂರಿನಲ್ಲಿ 100 ಅಡಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ, 2 ಪಶು ಆಸ್ಪತ್ರೆ ಹಾಗೂ ನೀರಾವರಿ ಇಲಾಖೆಗೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ, ಮದ್ದೂರಿನಲ್ಲಿ ಪಾಲಿಟೆಕ್ನಿಕ್ ಹಾಗೂ ಲಾ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟರು.

ಕಾರ್ಯಕ್ರಮದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ ಮಹದೇವಪ್ಪ,ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ, ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಮೈ ಶುಗರ್ ಸಕ್ಕರೆ ಕಂಪನಿಯ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Tags:
error: Content is protected !!