ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ೨೦೨೪-೨೫ ನೇ ಸಾಲಿನ ಕಬ್ಬು ನುರಿಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆಗಸ್ಟ್ ೫ರಂದು ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಪ್ರಾರಂಭವಾಗಿ ೨,೦೫,೦೦೦ ಟನ್ ಕಬ್ಬಿನ ಗುರಿಯ ಪೈಕಿ ೨,೦೧,೯೦೦ ಟನ್ ಕಬ್ಬನ್ನು ನುರಿಯಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ೨೦೨೩-೨೪ನೇ ಸಾಲಿನಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಗೆ ನೀಡಿದ ಆರ್ಥಿಕ ನೆರವು ಸದುಪಯೋಗ ಪಡಿಸಿಕೊಂಡು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಹಾರೈಕೆಯಿಂದ ಮೈಷುಗರ್ ಸಕ್ಕರೆ ಕಾರ್ಖಾನೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
೨೦೦೫-೦೬ರಿಂದ ಈವರೆಗೆ ಮೈಷುಗರ್ ಸಕ್ಕರೆ ಕಾರ್ಖಾನೆಗೆ ಸುಮಾರು ೬೫೦ ಕೋಟಿ ರೂ. ಸರ್ಕಾರ ನೆರವು ನೀಡಲಾಗಿದ್ದು, ಇದೇ ಮೊದಲ ಬಾರಿಗೆ ೨೦೨೪-೨೫ನೇ ಸಾಲಿನಲ್ಲಿ ಸರ್ಕಾರದ ಆರ್ಥಿಕ ನೆರವನ್ನು ಪಡೆಯದೇ ಕಬ್ಬನ್ನು ನುರಿಯಲಾಗಿದೆ ಎಂದು ಹೆಮ್ಮೆಯಿಂದ ನುಡಿದರು.
ಲಾಭದಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆ
೨೦೨೪-೨೫ನೇ ಸಾಲಿನದಲ್ಲಿ ಉತ್ಪಾದನೆಯಾದ ೧,೩೦,೦೦೦ ಕ್ವಿಂಟಾಲ್ ಸಕ್ಕರೆ ಮಾರಾಟ ಮಾಡಿ, ೪೫ ಕೋಟಿ ರೂ, ೧೨,೦೦೦ ಮೊಲಾಸಸ್ ಮಾರಾಟದಿಂದ ೧೫.೩೬ ಕೋಟಿ, ಕಾರ್ಖಾನೆಯ ಸಹ ವಿದ್ಯುತ್ ಘಟಕದಿಂದ ೧,೫೪,೯೩,೦೦೦ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ಸಕ್ಕರೆ ಕಾರ್ಖಾನೆ ನಡೆಸಲು ಕಳೆದ ಸಾಲಿನಲ್ಲಿ ೧೦ ಕೋಟಿ ರೂ ವ್ಯಯಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆಯಿಂದ ಸಕ್ಕರೆ ಕಾರ್ಖಾನೆಯನ್ನು ನಡೆಸಿ ಉಳಿದ ೭೧,೧೨,೮೮೦ ಯೂನಿಟ್ ಚೆಸ್ಕಾಂಗೆ ಮಾರಾಟ ಮಾಡಿ ೪.೩೩ ಕೋಟಿ ರೂ ಆದಾಯ ಗಳಿಸಿ ಕಾರ್ಖಾನೆಯನ್ನು ಲಾಭದಲ್ಲಿ ನಡೆಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರ ಮತ್ತಿತರೆ ಯಾವುದೇ ಮೂಲಗಳಿಂದ ಆರ್ಥಿಕ ನೆರವು ಪಡೆಯದೇ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಲಾಗಿದ್ದು, ಜಿಲ್ಲೆಯ ಇತರೇ ಕಾರ್ಖಾನೆಗಳಿಗೆ ಮಾದರಿಯಾಗಿದೆ. ಇದೀಗ ಖಾಸಗಿ ಕಾರ್ಖಾನೆಗಳು ಸಹ ರೈತರಿಗೆ ಕಬ್ಬಿನ ಹಣವನ್ನು ಹಂತ ಹಂತವಾಗಿ ನೀಡುವುದನ್ನು ಬಿಟ್ಟು ಒಮ್ಮೆಲೆ ಹಣ ಪಾವತಿ ಮಾಡಲು ಮುಂದಾಗಿವೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ರುದ್ರಪ್ಪ, ಗ್ರಾಮಾಂತರ ಅಧ್ಯಕ್ಷ ಅಪ್ಪಾಜಿಗೌಡ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸಾತನೂರು ಕೃಷ್ಣ, ರೈತ ಮೋರ್ಚಾ ಅಧ್ಯಕ್ಷ ದೇಶಿಹಳ್ಳಿ ಮೋಹನ್, ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಶ್ರೀಧರ್ ಇದ್ದರು.