Mysore
22
broken clouds
Light
Dark

ಕೆಆರ್‌ಎಸ್‌ನಿಂದ ಮುಂಗಾರು ಬೆಳೆಗೆ ನೀರು ಹರಿಸಲಾಗುವುದು: ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಕಟ್ಟು ನೀರು ಪದ್ಧತಿಯಲ್ಲಿ ಹರಿಸುವ ಕುರಿತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬುಧುವಾರ(ಜು.17) ನಾಗಮಂಗಲದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸ್ತುತ ಕೆಆರ್ ಎಸ್ ಜಲಾಶಯದಿಂದ ಕೆರೆಕಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ 36 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟ 111 ಅಡಿ ತಲುಪಿದೆ. ಸದ್ಯಕ್ಕೆ 115 ಅಡಿಯವರೆಗೆ ಜಲಾಶಯದ ನೀರಿನ ಮಟ್ಟ ತಲುಪುವ ನಿರೀಕ್ಷೆ ಇದೆ. ಮುಂದೆಯೂ ಮಳೆ ಉತ್ತಮವಾಗಿ ಬಿದ್ದು ಜಲಾಶಯ ಭರ್ತಿಯಾದರೆ ಎರಡನೇ ಬೆಳೆಗೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಬಿನಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿರುವುದರಿಂದ ಕೆಆರ್ ಎಸ್ ನಿಂದ ನೀರು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ಮಧ್ಯಭಾಗದಿಂದ ನೀರು ಹರಿಸುವುದು ವಾಡಿಕೆ. ಆ ಸಮಯದಿಂದಲೇ ಭತ್ತದ ಒಟ್ಲು ಮತ್ತು ರಾಗಿ ಬಿತ್ತನೆ ಪ್ರಾರಂಭವಾಗುತ್ತದೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಿಯಾದ ಸಮಯಕ್ಕೆ ರೈತರಿಗೆ ಅನುಕೂಲವಾಗುವಂತೆ ನೀರು ಹರಿಸುವ ನಿರ್ಧಾರ ಮಾಡಿದ್ದೇವೆ. ವಿರೋಧಿಗಳು ಸುಮ್ಮನೆ ರಾಜಕೀಯ ಲಾಭ ಪಡೆಯಲು ನೀರಿನ ವಿಚಾರದಲ್ಲಿ ಟೀಕೆ ಮಾಡುತ್ತಿದ್ದಾರೆ ಎಂದು ಜರಿದರು.

ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯ ತುಂಬಲಿಲ್ಲ. ಒಂದು ಬೆಳೆಗೆ ನೀರು ಕೊಡುವುದೂ ಕಷ್ಟವಾಗಿತ್ತು. ಇದರಿಂದ ಎರಡನೇ ಬೆಳೆಗೆ ನೀರು ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಮುಖ್ಯ ನಾಲೆಯನ್ನು ಆಧುನೀಕರಣಗೊಳಿಸಿ ಕೊನೆಯ ಭಾಗಕ್ಕೆ 24 ಗಂಟೆಯೊಳಗೆ ನೀರು ತಲುಪುವಂತೆ ಮಾಡಿದ್ದೇವೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ವಿರೋಧಿಗಳು ವಾಸ್ತವಾಂಶ ತಿಳಿದು ಮಾತನಾಡಬೇಕು ಎಂದು ಮೊನಚಾಗಿ ಹೇಳಿದರು.

ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯ ಕೈಗೊಳ್ಳುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಬಿತ್ತನೆ ಬೀಜ, ರಸಗೊಬ್ಬರ ಅಗತ್ಯವಿರುವಷ್ಟು ದಾಸ್ತಾನು ಇದೆ. 78 ಸೊಸೈಟಿಗಳು, 31 ರೈತ ಸಂಪರ್ಕ ಕೇಂದ್ರ ಸೇರಿದಂತೆ 109 ಸ್ಥಳಗಳಲ್ಲಿ ಬಿತ್ತನೆ ರಾಗಿ, ಭತ್ತ, ಮುಸುಕಿನಜೋಳ ವಿತರಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಮುಖಂಡ ಟಿ.ಎಲ್.ಕೃಷ್ಞೇಗೌಡ, ಮನ್ ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ ಸೇರಿದಂತೆ ಇತರರಿದ್ದರು.