ಮಂಡ್ಯ: ರೈತರ ಜೀವನಾಡಿ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಮಾಡಲು ನಿರ್ಧರಿಸಿರುವ ಸರ್ಕಾರದ ನಡೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿರೋಧ ವ್ಯಕ್ತಪಡಿಸಿದ್ದು, ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ವಿರುದ್ಧ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಆರ್‌ಎಸ್ ಕೊನೆಯ ಭಾಗದ ರೈತರಿಗೆ ನಾಲೆಗಳಲ್ಲಿ ನೀರು ತಲುಪುತ್ತಿಲ್ಲ. ಮೊದಲು ಇದನ್ನು ಸರಿಪಡಿಸಬೇಕು. ಡ್ಯಾಂ ಸುರಕ್ಷತೆ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಕೆಆರ್‌ಎಸ್ ಡ್ಯಾಂ ಇದ್ರೆ ನಾವು ಬದುಕುತ್ತೇವೆ, ಬೆಂಗಳೂರಿನವರು ಬದುಕುತ್ತಾರೆ ಎಂದರು.
ಇನ್ನು ಕೆಆರ್‌ಎಸ್ ಸುತ್ತಮುತ್ತಲಿನಲ್ಲಿ ರೈತರ ಭೂಮಿ ಇದೆ. ರೈತರಿಗೆ ಆತಂಕ ಇದೆ. ರಾಜ್ಯ ಸರ್ಕಾರ ನಾಲೆಗಳ ಅಭಿವೃದ್ಧಿಗೆ ದುಡ್ಡು ಕೊಡಲಿ. ಮೇಲುಕೋಟೆ ಸುತ್ತಮುತ್ತಲಿನಲ್ಲಿ ಡ್ರೈಲ್ಯಾಂಡ್ ಇದ್ದು, ನಾವು ಮೇಲುಕೋಟೆ ದೇವಸ್ಥಾನವನ್ನು ಅಭಿವೃದ್ಧಿ ಮಾಡಿ ಆರ್ಥಿಕತೆ ಹೆಚ್ಚಾಗುತ್ತೆ ಎಂದು ಯೋಚನೆ ಮಾಡ್ತೇವೆ. ಆದರೆ ಕೆಆರ್‌ಎಸ್ ಜಲಾಶಯದ ಸುತ್ತಮುತ್ತಲಿನಲ್ಲಿ ರೈತರ ನೀರಾವರಿ ಜಮೀನು ಇದೆ. ಹೀಗಾಗಿ ಡ್ಯಾಂ ಉಳಿಸುವ ಕೆಲಸ ಮಾಡಬೇಕು. ಡ್ಯಾಂಗೆ ಯಾವುದೇ ರೀತಿಯಲ್ಲೂ ಧಕ್ಕೆ ಬರದ ಹಾಗೆ ನೋಡಿಕೊಳ್ಳಬೇಕು. ಯೋಜನೆ ತರುವ ಮುನ್ನ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಚರ್ಚೆ ಮಾಡಬೇಕು. ರೈತರು ಉದ್ದೇಶ ಪೂರ್ವಕವಾಗಿ ವಿರೋಧ ಮಾಡ್ತಿಲ್ಲ. ಸರ್ಕಾರ ಒಂದು ಬಾರಿ ಜನರಿಗೆ ಮಾಹಿತಿ ಕೊಟ್ಟು ಚರ್ಚೆ ಮಾಡಲಿ ಎಂದು ಆಗ್ರಹಿಸಿದರು.





