ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್ ಶುರುವಾದಂತೆ ಕಾಣುತ್ತಿದೆ. ಯಾಕೆಂದರೆ ನಿನ್ನೆಯಷ್ಟೆ ಜಿಲ್ಲೆಯ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದರು. ಈ ಬೆನ್ನಲ್ಲೆ ಇಂದು ಸಚಿವ ಎನ್ ಚೆಲುವರಾಯಸ್ವಾಮಿ ಕೂಡ ಜನತಾ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ನಿನ್ನೆ (ಜು.೫ ) ಅಧಿಕಾರಿಗಳು ಗೈರಾಗಿದ್ದರು ಕೂಡ ಎಚ್.ಡಿ ಕುಮಾರಸ್ವಾಮಿ ಅವರು ಬೆಳಗ್ಗೆ ೧೧.೩೦ರಿಂದ ನಿರಂತರವಾಗಿ ಜನತಾ ದರ್ಶನ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳನ್ನ ಆಲಿಸಿ ಪರಿಹಾರ ಒದಗಿಸಲು ಮುಂದಾಗಿದ್ದರು.
ಇನ್ನು ಇಂದು ಹನುಮ ಧ್ವಜ ವಿವಾದ ನಡೆದ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಶಾಸಕ ಗಣಿಗ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಚಿವ ಚೆಲುವರಾಯಸ್ವಾಮಿ ಅವರಿಂದ ಜನತಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಎಚ್ಡಿಕೆ ನಡೆಸಿದ ಜನತಾ ದರ್ಶನದಲ್ಲಿ ಯಾರೊಬ್ಬ ಅಧಿಕಾರಿಗಳು ಕೂಡ ಹಾಜರಾಗಿರಲಿಲ್ಲ. ಆದರೆ ಇಂದು ನಡೆಯುವ ಕಾರ್ಯಕ್ರಮಕ್ಕೆ ೫೩ ಇಲಾಖೆಗಳ ಜಿಲ್ಲೆಯ ಅಧಿಕಾರಿಗಳು ಖುದ್ದು ಹಾಜರಿರಲು ಸೂಚನೆ ನೀಡಲಾಗಿದೆ. ಈ ಮೂಲಕ ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.