Mysore
22
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶದ ಬೂಕನಕೆರೆ-ಡಿಂಕಾ-ಅಶೋಕನಗರ ಮಾರ್ಗದ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಪಿ.ಬಿ.ಮಂಚನಹಳ್ಳಿ ಗ್ರಾಮದ ನಿವಾಸಿ ಪ್ರಜ್ವಲ್(19) ಮೃತ ಯುವಕನಾಗಿದ್ದಾರೆ. ಅದೇ ಕಾರಿನಲ್ಲಿ ಹೋಗುತ್ತಿದ್ದ ಪ್ರಜ್ವಲ್ ಸಂಬಂಧಿ ಕಾವ್ಯ(26) ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ
ಕಳೆದ ಒಂದು ತಿಂಗಳಿನಿಂದಲೂ ಈ ರಸ್ತೆಯಲ್ಲಿ ರೈತರು ನಿತ್ಯ ರಸ್ತೆಯಲ್ಲಿ ರಾಗಿ ಹುಲ್ಲು ಹಾಕಿ ಒಕ್ಕಣೆ ಮಾಡುತ್ತಿದ್ದರು. ಈ ಬಗ್ಗೆ ಹಲವು ಅಪಘಾತಗಳು ನಡೆದಿದ್ದರೂ ಸಹ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುವುದು ನಿರಂತರವಾಗಿ ನಡೆಯುತ್ತಿತ್ತು. ಇಂದೂ ಸಹ ಹಲವು ರೈತರು ರಸ್ತೆಯಲ್ಲಿ ರಾಗಿ ಹುಲ್ಲು ಹರಡಿ ಒಕ್ಕಣೆ ಮಾಡುತ್ತಿದ್ದ ಕಾರಣ ಮೃತ ಪ್ರಜ್ವಲ್ ಕಾರನ್ನು ಓಡಿಸಿಕೊಂಡು ಬರುತ್ತಿದ್ದಾಗ, ಚಾಲಕನ ನಿಯಣಂತ್ರಣ ತಪ್ಪಿದ ಕಾರು ಮಗುಚಿ ಬಿದ್ದಿದೆ. ಪರಿಣಾಮ ಪ್ರಜ್ವಲ್ ಅವರಿಗೆ ಗಂಭೀರವಾದ ಗಾಯಗಳುಂಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರಜ್ವಲ್ ಹತ್ತಿರದ ಸಂಬಂಧಿ ಕಾವ್ಯ ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಆನಂದೇಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿ ರಾಗಿ ಒಕ್ಕಣೆ ಮಾಡುತ್ತಿದ್ದ ಹಲವು ರೈತರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ನಾಳೆಯಿಂದ ಯಾರಾದರೂ ರಸ್ತೆಯಲ್ಲಿ ಒಕ್ಕಣೆ ಮಾಡಿದರೆ ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ ತಕ್ಷಣ ಒಕ್ಕಣೆ ಮಾಡುವ ರೈತರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಆನಂದೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ.

 

Tags:
error: Content is protected !!