Mysore
14
few clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಪೊಲೀಸರ ವಿರುದ್ಧ ಹೋರಾಟಗಾರರ ಆಕ್ರೋಶ

ಮಂಡ್ಯ : ಕಾವೇರಿ ಹೋರಾಟ ಹತ್ತಿಕ್ಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಹೋರಾಟಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಹೋರಾಟಕ್ಕೆ ಬರುತ್ತಿದ್ದವರನ್ನು ಪೊಲೀಸರು ತಡೆದಿದ್ದಾರೆ ಎಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಸ್ಥಳದಲ್ಲಿ ಹೋರಾಟಗಾರರು ಪೊಲೀಸರ ವಿರುದ್ಧ ಕಿಡಿಕಾರಿದರು.

ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕೇಂದ್ರ ಸ್ಥಳ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪೊಲೀಸರೇ ಬಂದ್ ಮಾಡಿದ್ದರು. ವೃತ್ತದ ಕಡೆಗೆ ನಾಲ್ಕು ದಿಕ್ಕಿನಲ್ಲೂ ಯಾವುದೇ ವಾಹನ ಸಂಚಾರ ಮಾಡದಂತೆ ಬ್ಯಾರಿಕೇಡ್ ಹಾಕಲಾಗಿತ್ತು, ಪಶ್ಚಿಮ ಪೊಲೀಸ್ ಠಾಣೆ ಹಾಗೂ ಕರ್ನಾಟಕ ಬಾರ್ ವೃತ್ತದ ಬಳಿ ರಸ್ತೆ ಬಂದ್ ಮಾಡಿದ್ದರೆ.

ಹೆದ್ದಾರಿಯಲ್ಲಿ ಪಿಇಎಸ್ ಕಾಲೇಜ್, ಕಾವೇರಿ ನೀರಾವರಿ ನಿಗಮ ಕಚೇರಿ ಸೇರಿ ಹಲವು ಕಡೆ ಮತ್ತು ಹೊಳಲು ವೃತ್ತದಿಂದ ವಾಹನಗಳು ಬಾರದಂತೆ ತಡೆ ಮಾಡಿದ್ದರು.

ಪೊಲೀಸರ ಇಂತಹ ಕ್ರಮ ಕಾವೇರಿ ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿತು ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ ಎಂದು ಆಕ್ರೋಶಿಸಿದರು. ಅಲ್ಲದೆ ಹೋರಾಟಗಾರರೇ ತೆರಳಿ ಬ್ಯಾರಿಕೇಡ್ ಗಳನ್ನು ಕಿತ್ತು ಒಗೆಯುವುದಾಗಿ ಕಿಡಿಕಾರಿದರು.

ಸಮಿತಿಯ ಸುನಂದ ಜಯರಾಂ ಮತ್ತು ಎಂ.ಎಸ್. ಆತ್ಮಾನಂದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತೆರವು ಮಾಡುವಂತೆ ಕೋರಿದರು. ಇದರಿಂದ ಹೋರಾಟಗಾರರ ಆಕ್ರೋಶ ಶಮನವಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!