Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕನ್ನಡ ಸಾಹಿತ್ಯದ ಎಲ್ಲಾ ಕೆಲಸಗಳು ಉತ್ತಮ ರೀತಿಯಲ್ಲಿ ಜರುಗಲಿ: ನಿರ್ಮಲಾನಂದ ಸ್ವಾಮೀಜಿ

ಮಂಡ್ಯ: ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಕೆಲಸಗಳು ಉತ್ತಮ ರೀತಿಯಲ್ಲಿ ಜರುಗಲಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ಅವರು ಇಂದು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದರು.

ಇದುವರೆಗೂ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವಾರು ಸಭೆ, ಕಾರ್ಯಕ್ರಮಗಳು ನಡೆದು ಪೂರ್ಣ ಸಿದ್ಧತೆಯ ಬಗ್ಗೆ ಚರ್ಚಿಸಲಾಗಿದೆ. ಇಂದಿನ ಸಭೆಯಲ್ಲಿ ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿ ಎಲ್ಲರೂ ಒಳ್ಳೆಯ ಸಲಹೆಗಳನ್ನು ನೀಡಿದ್ದೀರ ಎಂದರು.

ಕನ್ನಡ ಭಾಷೆಯನ್ನು ಅತ್ಯಂತ ಹೆಚ್ಚು ಮಾತನಾಡುವ ಜಿಲ್ಲೆ ಮಂಡ್ಯವಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಕೃಷಿ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಸಭೆಯಲ್ಲಿ ನೀಡಿರುವ ಎಲ್ಲಾ ಸಲಹೆಗಳನ್ನು ಪರಿಗಣಿಸಿ ಅಳವಡಿಸಿಕೊಳ್ಳಲಾಗುವುದು. ಸಮ್ಮೇಳನಕ್ಕೆ ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆಯಿಟ್ಟಿದ್ದು ಹೆಚ್ಚಿನ ಅನುದಾನ ನೀಡಲು ಮುಂದಾಗಿ ಸಮ್ಮೇಳನದ ಸಕಲ ಸಿದ್ಧತೆಯನ್ನು ಮಾಡಲಾಗುವುದು. ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಯಾವುದೇ ವಿಷಯಗಳು ಕಂಡು ಬಂದಲ್ಲಿ ಕೂಡಲೇ ನಮ್ಮ ಗಮನಕ್ಕೆ ತನ್ನಿ. ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿ ಮಾಡೋಣ ಎಂದರು.

ವಿಶೇಷ ಬಸ್ ವ್ಯವಸ್ಥೆ:  ಸಮ್ಮೇಳನಕ್ಕೆ ಆಗಮಿಸಲು ಮೈಸೂರು, ಬೆಂಗಳೂರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಪ್ರಯಾಣವು ಉಚಿತವಾಗಿದ್ದು, ಪುರುಷರು ಟಿಕೆಟ್ ಪಡೆದು ವಿಶೇಷ ಬಸ್ ನಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅನಾವಶ್ಯಕ ಚರ್ಚೆಗೆ ಆಸ್ಪದ ನೀಡದೆ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ಸಮ್ಮೇಳನದ ಎಲ್ಲಾ ಕೆಲಸಗಳು ಕ್ರಿಯಾಯೋಜನೆಯ ಪ್ರಕಾರ ನಡೆಯುತ್ತಿದೆ. ಈ ಬಾರಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿ ಅನೇಕ ವಿಷಯಗಳಲ್ಲಿ ವಿಶೇಷತೆಯಿದೆ. ಅವುಗಳನ್ನು ಸಮ್ಮೇಳನದಲ್ಲಿ ತಿಳಿಸುವ ದ್ವಾರಗಳನ್ನು ನಿರ್ಮಿಸಲು ಚಿಂತಿಸಲಾಗಿದೆ ಎಂದರು.

ಸಮ್ಮೇಳನಕ್ಕೆ ಒಟ್ಟು 18 ದೇಶಗಳಿಂದ ವಿದೇಶಿ ಕನ್ನಡಿಗರು ಆಗಮಿಸುತ್ತಿದ್ದು, ಅವರು ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಬಗ್ಗೆ ಮಾಹಿತಿಯಿದೆ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕೆಂದು ತೀರ್ಮಾನಿಸಲಾಗಿದೆ. ಸಮ್ಮೇಳನದ ಪ್ರತಿಯೊಂದು ಕೆಲಸವು ಸುಸೂತ್ರವಾಗಿ ನಡೆಯುತ್ತಿದ್ದು, ಅತ್ಯಂತ ಯಶಸ್ವಿಯಾಗಿ ದಾಖಲೆಯನ್ನು ನಿರ್ಮಿಸುವ ರೀತಿಯಲ್ಲಿ ಕನ್ನಡಿಗರ ಹಬ್ಬವನ್ನು ಆಚರಿಸೋಣ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕರುಗಳಾದ ಮಧು ಜಿ ಮಾದೇಗೌಡ, ವಿವೇಕಾನಂದ ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕರುಗಳಾದ ಪಿ ರವಿಕುಮಾರ್, ಎಬಿ ರಮೇಶ ಬಂಡಿಸಿದ್ದೇಗೌಡ, ಪಿಎಂ ನರೇಂದ್ರಸ್ವಾಮಿ, ಹೆಚ್. ಟಿ ಮಂಜು, ಕೆ ಎಂ ಉದಯ, ಮಾಜಿ ಸಂಸದೆ ಸುಮಲತಾ ಅಂಬರೀಶ್, ಮಾಜಿ ವಿಧಾನ ಪರಿಷತ್ ಶಾಸಕ‌ ಮರಿತೀಬ್ಬೆಗೌಡ, ಮಾಜಿ ಶಾಸಕ ಕೆ ಅನ್ನದಾನಿ, ಶ್ರೀಕಂಠೇಗೌಡ, , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್, ಕಸಾಪ ಸಂಚಾಲಾಕಿ ಡಾ ಮೀರಾಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಕ.ಸಾಪ ಕಾರ್ಯದರ್ಶಿ ಕೃಷ್ಣೆಗೌಡ, ಹರ್ಷ, ಅಪ್ಪಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: