Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ

150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು ಯುವಜನರಿಗೆ ಉದ್ಯೋಗ

ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಿದ ಪ್ರತಿಷ್ಠಿತ ಕಂಪನಿಗಳು

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ಮಂಡ್ಯ ಟೂ ಇಂಡಿಯಾ ಬೃಹತ್ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ ದೊರೆಯಿತು.

ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಭಾರತೀಯ ಭೂಸೇನೆ, ವಾಯುಪಡೆ, ನೌಕಾಪಡೆ ಸೇರಿದಂತೆ ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್, ಹ್ಯುಂಡೈ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಭಾಗಿಯಾಗಿ ಒಟ್ಟಾರೆ ಸಾವಿರಾರು ಪ್ರತಿಭಾನ್ವಿತ ಯುವಜನರನ್ನು ಆಯ್ಕೆ ಮಾಡಿಕೊಂಡಿವೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗದಾತ ಕಂಪನಿಗಳು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸುತ್ತಿದ್ದು, ಎಷ್ಟು ಮಂದಿಗೆ ನೇಮಕಾತಿ ಆಗಿದೆ ಎಂಬ ಮಾಹಿತಿಯನ್ನು ಉದ್ಯೋಗ ಮೇಳದ ಕೊನೆಯ ದಿನವಾದ ಶನಿವಾರ ತಿಳಿಸಲಾಗುವುದು ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಮಂಡ್ಯ ಟೂ ಇಂಡಿಯಾ

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವರು; ಮಂಡ್ಯ ಟೂ ಇಂಡಿಯಾ ಎನ್ನುವ ಘೋಷವಾಕ್ಯದೊಂದಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಮಂಡ್ಯದ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು ಎಂಬುದು ನನ್ನ ಭಾವನೆ. ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವುದು ನನ್ನ ಮಹದಾಸೆ ಆಗಿತ್ತು. ನನ್ನ ಮನವಿಗೆ ಸ್ಪಂದಿಸಿ ಅನೇಕ ಕಂಪನಿಗಳು ಮಂಡ್ಯಕ್ಕೆ ಬಂದಿವೆ ಎಂದು ಕೇಂದ್ರ ಸಚಿವರು ಹೇಳಿದರು.

ಉದ್ಯೋಗ ಮೇಳಕ್ಕೆ ಹೆಚ್ ಎಂಟಿ, ಬಿಹೆಚ್ ಇಎಲ್, ಎನ್ ಎಂಡಿಸಿ ಆರ್ ಐ ಎಲ್ ಸೇರಿದಂತೆ ಹಲವಾರು ಕಂಪನಿಗಳ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕರು ಬಂದಿದ್ದರು. ಅವರೆಲ್ಲರೂ ನಮ್ಮ ಭಾಗದ ಯುವಜನರಿಗೆ ಉದ್ಯೋಗ ಕಲ್ಪಿಸಲು ಉತ್ಸುಕರಾಗಿದ್ದಾರೆ. ಎಲ್ಲರೂ ದೊಡ್ಡ ಪ್ರಮಾಣದಲ್ಲಿ ಯುವಕರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಪ್ರತಿದಿನವೂ ನನ್ನ ಮನೆಗೆ ಬರುವ ಅಸಂಖ್ಯಾತ ನಿರುದ್ಯೋಗಿ ಯುವ ಜನರು ಉದ್ಯೋಗ ಕೊಡಿಸಿ ಎಂದು ಕೇಳುತ್ತಾರೆ. ಅವರ ತಂದೆತಾಯಿ ಮಕ್ಕಳ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಂಡಿದ್ದಾರೆ. ನಿತ್ಯವೂ ನೂರಾರು ಜನರು ನನ್ನ ಮನೆಯ ಬಳಿಗೆ ಬಂದಾಗ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಆದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಉದ್ಯೋಗ ಮೇಳದ ಮೂಲಕ ಸಾವಿರಾರು ಸಂಖ್ಯೆಯಷ್ಟು ಯುವ ಜನರಿಗೆ ಕೆಲಸ ಸಿಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕೆಲ ಪ್ರತಿಷ್ಠಿತ ಕಂಪನಿಗಳು

ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್, ಹುಂಡೈ, ಸಿಸಿಎಫ್, ಎನ್ ಎಸ್ ಐ ಎಲ್, ಬಿಇಎಲ್, ಹೊಂಡ ಮೋಟಾರ್ಸ್, ಟಿವಿಎಸ್, ಟೊಯೊಟಾ, ಮಾರುತಿ ಸುಜುಕಿ, ಎಂ ಜಿ ಮೋಟಾರ್ಸ್, ವೋಲ್ವೋ, ಕಿಯಾ ಮೋಟಾರ್ಸ್, ಮರ್ಸಿಡಿಸ್, ಬಿಎಂಡಬ್ಲ್ಯು, ಸ್ಕೋಡಾ, ಎಥರ್ ಸೇರಿದಂತೆ ನೂರಾ ಐವತ್ತಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದವು.

ನನ್ನ ಸಚಿವಾಲಯದ ಉನ್ನತ ಅಧಿಕಾರಿಗಳು, ಮಂಡ್ಯ ಜಿಲ್ಲೆಯ ಉನ್ನತ ಹಾಗೂ ಎಲ್ಲಾ ಶ್ರೇಣಿಯ ಅಧಿಕಾರಿಗಳು ಉದ್ಯೋಗ ಮೇಳ ಯಶಸ್ಸಿಗೆ ಕೆಲಸ ಮಾಡುತ್ತಿದ್ದು, ಉದ್ಯೋಗ ಅರಸಿ ಬರುವ ಅಭ್ಯರ್ಥಿಗಳಿಗೆ ನಮ್ಮ ಸ್ವಯಂ ಸೇವಕರು, ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಂಪನಿಗಳ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಗಮನಿಸಿದ ನಂತರ ಅವರಿಗೆ ಸೂಕ್ತವಾದ, ಅರ್ಹವಾದ ಹುದ್ದೆಯನ್ನು ನೀಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags: