Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮಂಡ್ಯ: ಕೆರೆಗಳಿಗೆ ಶೀಘ್ರ ನೀರು ತುಂಬಿಸಲು ಸೂಚನೆ

ಮಂಡ್ಯ: ಜಿಲ್ಲೆಯಲ್ಲಿ 968 ಕೆರೆಗಳಿದ್ದು, 448 ಕೆರೆಗಳು ಮಾತ್ರ ಶೇ. 100% ರಷ್ಟು ತುಂಬಿದೆ. ಎಲ್ಲಾ ಕೆರೆಗಳು 15 ದಿನಗಳಲ್ಲಿ ತುಂಬಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಭು ಕುಮಾರ್  ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಕೆರೆಗಳು ಮಳೆ ಆಶ್ರಿತವಾಗಿರುತ್ತದೆ. ಈ ಬಾರಿ ಉತ್ತಮ ಮಳೆಯಾಗಿದ್ದರೂ ಕೆರೆ ತುಂಬಿಲ್ಲ ಎಂದರೆ ಕೆರೆಯ ನೀರು ಹರಿದು ಬರುವ ಸ್ಥಳಗಳು ಒತ್ತುವರಿಯಾಗಿವೆ ಎಂದರ್ಥ. ಕೆರೆಯ ಸ್ಥಳ ಪರಿಶೀಲನೆ ನಡೆಸಿದರೆ, ಅಲ್ಲಿಯ ರೈತರು ಅದಕ್ಕೆ ಸರಿಯಾದ ಕಾರಣ ನೀಡುತ್ತಾರೆ.  ಈ ಬಗ್ಗೆ ತಹಶೀಲ್ದಾರ್ ಗಳು ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕೆರೆಗಳು ಜನರ ಬದುಕಿನ ಆಧಾರ, ಒಂದು ಕೆರೆ ತುಂಬಿದರೆ ಎರಡು ಅಥವಾ ಮೂರು ಹಳ್ಳಿಗೆ ನೀರು ಒದಗಿಸಬಹುದು‌. ಕೆರೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವಿಪತ್ತು ನಿರ್ವಹಣಾ ಅನುದಾನದಲ್ಲಿ 2 ಲಕ್ಷ ರೂ ಹಣ ಬಳಕೆ ಮಾಡಿಕೊಳ್ಳಬಹುದು ಎಂದರು.

ಬಡವರ ಮನೆ ಹಾನಿಯಾದಾಗ ಸರ್ಕಾರ ನೀಡುವ ಪರಿಹಾರ ಹಣವನ್ನು 48 ಗಂಟೆಯೊಳಗೆ ಪರಿಶೀಲನೆ ನಡೆಸಿ ಒದಗಿಸುವುದು ತಹಶೀಲ್ದಾರ್ ಜವಾಬ್ದಾರಿಯಾಗಿರುತ್ತದೆ. ಅಕ್ಟೋಬರ್ ಮಾಹೆಯಲ್ಲಿ ಮಳೆಯಿಂದ ಮನೆ ಹಾನಿಯಾಗಿರುವ 84 ಮನೆಗಳಿಗೆ ಪರಿಹಾರ ಪಾವತಿಯಾಗಿಲ್ಲ , ಎರಡು ದಿನದಳೊಳಗೆ ಪರಿಹಾರ ಒದಗಿಸಿ ವರದಿ ನೀಡುವಂತೆ ಸೂಚನೆ ನೀಡಿದರು.

ರೈತರಿಗೆ ರಸಗೊಬ್ಬರ, ಮಳೆ ಹಾನಿ, ಬರ ಪರಿಹಾರ ಸೇರಿದಂತೆ ವಿವಿಧ ರೀತಿಯ ಕೃಷಿ ಹಾಗೂ ತೋಟಗಾರಿಕೆ ಸೌಲಭ್ಯ ಒದಗಿಸಲು ಸಹಕಾರಿಯಾಗಿದ್ದು, ಬೆಳೆ ಸಮೀಕ್ಷೆಯನ್ನು ಅಂಗೈಯಲ್ಲಿ ಮಾಹಿತಿ ಎನ್ನಬಹುದು. ಇದು ಶೇ 100 ರಷ್ಟು ಪೂರ್ಣಗೊಳ್ಳಬೇಕು ಎಂದರು.

ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪಬೇಕು. ಬ್ಯಾಂಕ್ ಖಾತೆ ಸಂಖ್ಯೆಗೆ ಆಧಾರ್ ಜೋಡಣೆ ಮಾಡದೇ ಇರುವುದು ಹಣ ಪಾವತಿ ತಲುಪದೆ ಇರುವುದು ಮುಖ್ಯ ಕಾರಣವಾಗಿರುತ್ತದೆ. ಇದನ್ನು ಫಲಾನುಭವಿಗಳಿಗೆ ಮಾಹಿತಿ ನೀಡಿ ಸರಿಪಡಿಸಿ ಇದರಿಂದ ಬಹಳಷ್ಟು ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗಬಾರದು. ತಾಲ್ಲೂಕುವಾರು ಪರಿಶೀಲನೆ ನಡೆಸಿ, ವಿಶೇಷ ತರಗತಿ ನಡೆಸಿ, ಪ್ರತಿ ಶಾಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಎಂದು ತಿಳಿಸಿದರು.

ಅಧಿಕಾರಿಗಳು ತಮ್ಮ ಇಲಾಖೆ ನೀಡುವ ನಿರ್ದೇಶನ ಹಾಗೂ ಸೂಚನೆಯಂತೆ ಕಾರ್ಯ ನಿರ್ವಹಿಸಿ. ಇಲಾಖೆಗಳಲ್ಲಿ ಅವಧಿ ಮೀರಿ ಯಾವುದೇ ಪ್ರಕರಣಗಳು ಬಾಕಿ ಉಳಿಯದಂತೆ ಪಾರದರ್ಶಕವಾಗಿ ಕೆಲಸ ಮಾಡಿ ಸೂಚಿಸಿದರು.

ಜಿಲ್ಲೆಯಲ್ಲಿನ ಒಟ್ಟು 969 ಕೆರೆಗಳ ಪೈಕಿ 448 ಕೆರೆಗಳು ಶೇ. 100% ರಷ್ಟು ಸಂಪೂರ್ಣವಾಗಿ ತುಂಬಿದ್ದು, 132 ಕೆರೆಗಳು ಶೇ. 75% ರಿಂದ 100% ರಷ್ಟು ತುಂಬಿವೆ. 123 ಕೆರೆಗಳು ಶೇ. 50% ನಿಂದ 75% ರಷ್ಟು ತುಂಬಿವೆ. 122 ಕೆರೆಗಳು ಶೇ. 25% ನಿಂದ 50% ರಷ್ಟು ಹಾಗೂ 143 ಕೆರೆಗಳಲ್ಲಿ ಶೇ. 25% ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ.  ಜೊತೆಗೆ ವಿಪತ್ತು ನಿರ್ವಹಣೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳು, ಬಾಲ್ಯ ವಿವಾಹ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿದ್ದು, ಇದಕ್ಕೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ಕುಮಾರ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಲ ಜೀವನ್ ಮಿಷನ್, ಶುದ್ಧ ಕುಡಿಯುವ ನೀರಿನ ಘಟಕ, ಬೂದು ನೀರು, ತ್ಯಾಜ್ಯ ನಿರ್ವಾಹಣೆ ವಿಷಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 233 ಗ್ರಾಮ ಪಂಚಾಯಿತಿಗಳಿದ್ದು, 1306 ಗ್ರಾಮಗಳಿವೆ. ಜಲಜೀವನ್ ಮಿಷನ್ ಅಡಿಯಲ್ಲಿ ಒಟ್ಟು 3,61,862 ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದ್ದು, ಬಾಕಿ 39,263 ಕುಟುಂಬಗಳಿಗೆ ನಳ ಸಂಪರ್ಕ ಕಲ್ಪಿಸಬೇಕಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗಂಗಾಧರ ಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags: