ಮಂಡ್ಯ: ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ವ್ಯಾಪವ ಭ್ರಷ್ಟಾಚಾರ ನಡೆದಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಾಮಾಜಿಕ ಕಾರ್ಯಕರ್ತ ಮಧು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುವ ಕಟ್ಟಡಗಳ ನಿರ್ಮಾಣದಲ್ಲಿ ಬಾರಿ ಅವ್ಯವಹಾರ ನಡೆಸಿರುವ ಕೇಂದ್ರದ ನಿವೃತ್ತ ಯೋಜನಾ ವ್ಯವಸ್ಥಾಪಕ ನರೇಶ್ ನಾಲ್ಕಾರು ಕೋಟಿ ರೂ ಲಪಟಾಯಿಸಿದ್ದಾರೆ ಎಂದು ದೂರಿದರು.
ಮದ್ದೂರು ತಾಲೂಕಿನ ಹರಕನಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡದ ಕಾಮಗಾರಿ ಆರಂಭಿಸದೇ ಕಟ್ಟಡ ಕಾಮಗಾರಿಗೆ ಮೀಸಲಿಟ್ಟಿದ್ದ ೨೫ ಲಕ್ಷ ರೂಗಳಲ್ಲಿ ಮುಂಗಡ ಹಣ ೧೮.೭೫ ಬಿಡುಗಡೆಯಾಗಿದ್ದು, ಕೇಂದ್ರದ ಸಿಬ್ಬಂದಿಯೇ ಆದ ಸುನಿಲ್ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಠಿಸಿ, ೧,೦೨,೬೧೦ ರೂ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮಂಡ್ಯ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ, ಮದ್ದೂರು, ಪಾಂಡವಪುರ ತಾಲೂಕಿನಲ್ಲಿ ಐಟಿಐ ಕಾಲೇಜುಗಳ ವರ್ಕ್‌ಶಾಪ್ ಮತ್ತು ಟೆಕ್ನಾಲಜಿ ಲ್ಯಾಬ್ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಅಂದಾಜು ಮೊತ್ತ ೮೩.೨೯ ಲಕ್ಷ ರೂ ಮತ್ತು ೨೦.೨೯ ಲಕ್ಷ ರೂ ಕ್ರಮವಾಗಿ ಸಿದ್ದಗೊಳಿಸಿ, ಅಲ್ಲಿಯೂ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆಸಿದ್ದಾರೆ ಎಂದು ದಾಖಲೆಗಳನ್ನು ಮುಂದಿಟ್ಟರು.
ಇಷ್ಟಲ್ಲದೇ ಜಿಲ್ಲೆಯಲ್ಲಿ ಹೀಗೆಯೇ ಹಲವು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವ ನರೇಶ್ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಹಣ ನುಂಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.