Mysore
19
overcast clouds
Light
Dark

ಮಂಡ್ಯ: ಆ.27ಕ್ಕೆ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆ| ಪಾರದರ್ಶಕ ಹಾಗೂ ವ್ಯವಸ್ಥಿತ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ: ಡಾ ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಆಗಸ್ಟ್ 27 ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ 2023-24 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ಗ್ರೂಪ್ ’ಬಿ’ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಜರುಗಲಿದ್ದು, ಪರೀಕ್ಷೆಗಳನ್ನು ಪಾರದರ್ಶಕವಾಗಿ ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೆ ನಿಷ್ಪಕ್ಷಪಾತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ  ಸೂಚಿಸಿದರು.

ಅವರು ಇಂದು(ಆ.23) ಗೆಜೆಟೆಡ್ ಪ್ರೊಬೇಷನರ್ ಗೂಪ್ ‘ಎ’ ಮತ್ತು ಗ್ರೂಪ್ ’ಬಿ’ ವೃಂದದ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಬಗ್ಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.

ಪರೀಕ್ಷೆ ನಡೆಸಲು ಮಂಡ್ಯ ಜಿಲ್ಲೆಯಲ್ಲಿ 12 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಒಟ್ಟು 6617 ಅಭ್ಯರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ, ಪರೀಕ್ಷೆಯು ಬೆಳಿಗ್ಗೆ 10 ರಿಂದ12 ಗಂಟೆವರೆಗೆ ಪತ್ರಿಕೆ-1 ಮತ್ತು ಮದ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ ಪತ್ರಿಕೆ-2 ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪರೀಕ್ಷೆ ಗೌಪ್ಯತೆ ಯಲ್ಲಿ ಯಾವುದೇ ರಾಜಿಯಿಲ್ಲದಂತೆ ನ್ಯಾಯ ಸಮ್ಮತವಾಗಿ ನಡೆಸಿ ಎಂದು ನಿರ್ದೇಶನ ನೀಡಿದರು.

ಪರೀಕ್ಷೆಯು ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಿ ಎಂದು ಹೇಳಿದರು.

ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ವೈಟ್ ಫ್ಲೂಯಿಡ್, ವೈರ್ ಲೆಸ್ ಸೆಟ್ಸ್, ಕ್ಯಾಲ್ಕುಲೇಟರ್ ಇತ್ಯಾದಿಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ವೈದ್ಯರು / ಆರೋಗ್ಯ ಸಿಬ್ಬಂದಿಗಳನ್ನು ನೇಮಕ ಮಾಡುವುದು ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯ, ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.

ಕೊಠಡಿ ಸಂವಿಕ್ಷಕರು ಅಭ್ಯರ್ಥಿಗಳ ಚಲನವಲನಗಳನ್ನು ಆಗಿಂದಾಗ್ಗೆ ಸೂಕ್ಷ್ಮವಾಗಿ ಗಮನಿಸಿ, ಯಾವುದೇ ಅಭ್ಯರ್ಥಿ ಸಂಶಯಾತ್ಮಕವಾಗಿ ವರ್ತಿಸುತ್ತಿದ್ದಲ್ಲಿ ತಕ್ಷಣ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಹಾಗೂ ಪರೀಕ್ಷಾ ಕೇಂದ್ರದ ಸ್ಥಳೀಯ ನಿರೀಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮವಹಿಸಿ ಎಂದರು.

ಪರೀಕ್ಷಾ ಕೊಠಡಿಗಳಲ್ಲಿನ ಸಿ.ಸಿ ಟಿವಿ ಕ್ಯಾಮೆರಾಗಳು ಮತ್ತು Body Camera ಗಳು ಪರೀಕ್ಷಾ ಪ್ರಕ್ರಿಯೆಯನ್ನು ಮತ್ತು ಎಲ್ಲಾ ಅಭ್ಯರ್ಥಿಗಳು ಹಾಗೂ ಸಂವೀಕ್ಷಕರ ಚಲನವಲನಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಅಳವಡಿಸುವ ಸಲುವಾಗಿ ಸೂಕ್ತ ಕ್ರಮವಹಿಸುವಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದರು.

ಅಂಧ/ದೃಷ್ಟಿಮಾಂದ್ಯ ಅಭ್ಯರ್ಥಿಗಳು ಹಂಚಿಕೆಯಾದಲ್ಲಿ ಅವರು ಪರೀಕ್ಷೆಯನ್ನು ಬರೆಯಲು ಸ್ವಂತ ಲಿಪಿಕಾರರೊಂದಿಗೆ, ಬರುವುದರಿಂದ, ಅಭ್ಯರ್ಥಿಯಿಂದ ಅಂಗವಿಕಲತೆಯ ಪ್ರಮಾಣ ಪತ್ರವನ್ನು ಹಾಗೂ ಲಿಪಿಕಾರರ ಭಾವಚಿತ್ರ ಮತ್ತು ಗುರುತಿನ ಚೀಟಿ ಹಾಗೂ ಇತರೆ ವಿವರಗಳೊಂದಿಗೆ ದೃಢೀಕರಣವನ್ನು ನಿಗದಿತ ನಮೂನೆಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿ ಪಡೆದುಕೊಂಡು ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು