Mysore
27
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮಂಡ್ಯ: ಅಂಗನವಾಡಿ ಆಹಾರ ತಯಾರಿಕಾ ಘಟಕಗಳಿಂದಲೇ ಆಹಾರ ತಯಾರಿಕೆ

ಮಂಡ್ಯ:  ಜಿಲ್ಲೆಯಲ್ಲಿ ಒಟ್ಟು 4 ಅಂಗನವಾಡಿ ಆಹಾರ ತಯಾರಿಕಾ ಘಟಕಗಳಿದ್ದು, ಇದುವರೆಗೂ ಬೇರೆ ಕಡೆಯಿಂದ ಆಹಾರವನ್ನು ತರಿಸಿಕೊಂಡು 1 ಘಟಕದಿಂದ ತಲಾ 2 ತಾಲ್ಲೂಕುಗಳ ಅಂಗನವಾಡಿಗೆ ಆಹಾರವನ್ನು ನೀಡಲಾಗುತ್ತಿತ್ತು. ಇನ್ನುಮುಂದೆ ಇಡೀ ಜಿಲ್ಲೆಯ ಪ್ರತಿಯೊಂದು ಅಂಗನವಾಡಿಗೆ ಆಹಾರ ಪದಾರ್ಥಗಳನ್ನು ಜಿಲ್ಲೆಯ ಆಹಾರ ಘಟಕದಲ್ಲಿಯೇ ತಯಾರಿಸಿ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ ಹೆಚ್ ಕೃಷ್ಣತಿಳಿಸಿದರು.

ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಭೇಟಿ ನೀಡಿ ಜಿಲ್ಲೆಯಲ್ಲಿರುವ ನ್ಯೂನ್ಯತೆಗಳನ್ನು ಕಂಡುಹಿಡಿದು ಪರಿಶೀಲನೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಮಂಡ್ಯ ಮತ್ತು ದುದ್ದ ಎಂ ಎಸ್ ಪಿ ಸಿ ಘಟಕ ಬೂದನೂರಿಗೆ ಭೇಟಿ ನೀಡಿದಾಗ ಅಲ್ಲಿ ಅನೇಕ ನ್ಯೂನ್ಯತೆಗಳಿದ್ದದ್ದು ಕಾಣಿಸಿತು. ಎಷ್ಟು ಆಹಾರ ಪದಾರ್ಥಗಳನ್ನು ತರಿಸಲಾಗುತ್ತಿದೆ, ಆಹಾರ ಪ್ರಮಾಣ ಹಾಗೂ ಸರಿಯಾದ ದಾಖಲೆಗಳಿಲ್ಲದ ಕಾರಣ 5 ಮಂದಿಯನ್ನು 1 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇಂದು ಅವರುಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸರಿಯಾದ ವರದಿ ಹಾಗೂ ದಾಖಲಾತಿಗಳನ್ನು ಸಲ್ಲಿಸಿರುವುದರಿಂದ ಮತ್ತೆ ಇಂತಹ ತಪ್ಪುಗಳು ಮರುಕಳಿಸಬಾರದೆಂದು ತಿಳಿಸಿ ಕೆಲಸಕ್ಕೆ ಹಾಜರಾಗುವಂತೆ ಅವರಿಗೆ ಅವಕಾಶವನ್ನು ನೀಡಲಾಗಿದೆ ಎಂದರು.

ತಪ್ಪು ಎಲ್ಲರೂ ಸಹಜವಾಗಿ ಮಾಡುತ್ತಾರೆ. ಆದರೆ ಆ ತಪ್ಪನ್ನು ಪದೆ ಪದೇ ಎಸಗಬಾರದು. ತಾವು ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಸರಿ ದಾರಿಯಲ್ಲಿ ನಡೆಯುವುದಾಗಿ ತಿಳಿಸಿದಾಗ ಅವರಿಗೆ ಮತ್ತೊಂದು ಅವಕಾಶವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಮತ್ತೆ ಇದೇ ರೀತಿಯ ತಪ್ಪುಗಳು ಕಂಡುಬಂದಲ್ಲಿ ಅವರನ್ನು ಶಾಶ್ವತವಾಗಿ ಕೆಲಸದಿಂದ ತೆಗೆಯಲಾಗುವಂತೆ ಎಚ್ಚರಿಕೆ ನೀಡಿದ್ದೇನೆ ಎಂದರು.

ಕಳೆದ ತಿಂಗಳು ಮಂಡ್ಯ ಮಿಮ್ಸ್ ನಲ್ಲಿ ಭೇಟಿ ನೀಡಿದಾಗ ಅಲ್ಲಿನ ಆಹಾರ ಘಟಕದಲ್ಲಿ ಆಹಾರವನ್ನು ತಯಾರಿಸಿ ರೋಗಿಗಳಿಗೆ ನೀಡುವಂತೆ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ತಿಳಿಸಲಾಗಿತ್ತು. ಈ ಸಂಬಂಧ ಇಲಾಖೆಯು ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಹಂತದಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನೊಳಗೊಡಂತೆ ಸಭೆ ನಡೆಸಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಪಿ ಎಸ್ ಆಶಾ, ಮಂಡ್ಯ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ ಕೆ ಕುಮಾರಸ್ವಾಮಿ, ಮಾಜಿ ನಗರಸಭೆ ಸದಸ್ಯ ಅಮ್ಜದ್ ಪಾಷಾ, ಮುಖಂಡರಾದ ಸೋಮು ಉಪಸ್ಥಿತರಿದ್ದರು.

Tags:
error: Content is protected !!