ಮಂಡ್ಯ: ಬೂದನೂರು ಗ್ರಾಮ ಪಂಚಾಯಿತಿಯ ಹಾಲಿ ಆಡಳಿತ ಮಂಡಳಿಯ ಭ್ರಷ್ಟಾಚಾರದ ಸಂಬಂಧ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳ ಸಮಿತಿ ಸಲ್ಲಿಸಿರುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಸಿಇಓ ನಂದಿನಿ ಅವರು ಮುಂದಾಗಬೇಕು ಎಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸಂಚಾಲಕ ಬಿ.ಕೆ.ಸತೀಶ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂದನೂರು ಪಂಚಾಯಿತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ದೂರಿದ ಹಿನ್ನಲೆ ಪಂಚಾಯಿತಿಯ ಕಛೇರಿಯ ಮೇಲೆ ದಾಳಿ ನಡೆಸಿದ ಸಮಿತಿ ವರದಿ ನೀಡಿದ್ದು, ಕೇವಲ ೧ ವರ್ಷದ ಅವಧಿಯ ಭ್ರಷ್ಟಾಚಾರವೇ ಕ್ರಮ ಕೈಗೊಳ್ಳುವಂತಹ ಸಾಕ್ಷಿಗಳನ್ನು ಒದಗಿಸಿದ್ದು, ಇನ್ನೂ ೩ ವರ್ಷಗಳ ವರದಿ ಯಾವ ಸ್ಥಿತಿಯಲ್ಲಿರಬಹುದು ಎಂದರು.
ಸಮಿತಿಯು ೧೮ ವಿಷಯಗಳ ಪೈಕಿ ೬ ಮುಖ್ಯತಪ್ಪುಗಳ ಕುರಿತು ಅಭಿಪ್ರಾಯ ತಿಳಿಸಿದ್ದು, ಪಂಚಾಯಿತಿಯಲ್ಲಿ ನಿಯಮಾನುಸಾರ ಖರೀದಿ ಪ್ರಕ್ರಿಯೆಗಳು ನಡೆಯದಿರುವುದು, ಕ್ರಮಬದ್ಧ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ ಮಾಡದಿರುವುದು, ನಿಯಮಾನುಸಾರ ದಾಸ್ತಾನು, ವಿತರಣಾ ವಹಿ ನಿರ್ವಹಿಸದಿರುವುದು, ಅನುಪಯುಕ್ತ ಸಾಮಗ್ರಿಗಳ ವಹಿ ನಿರ್ವಹಿಸದಿರುವುದು, ನಿಯಮಾನುಸಾರ ಅವುಗಳ ವಿಲೇವಾರಿ ಮಾಡದಿರುವುದು, ಘನ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು, ಉದ್ದಿಮೆ/ವಾಣಿಜ್ಯ ಚಟುವಟಿಕೆಗಳಿಗೆ ಕರ ನಿರ್ಧರಣೆ ಮಾಡಿ, ಪರವಾನಗಿ ನೀಡಿ ಸಂಪನ್ಮೂಲ ಕೃಢೀಕರಣಕ್ಕೆ ಕ್ರಮ ವಹಿಸದಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ತಿಳಿಸಿದರು.
ಅಲ್ಲದೇ ಬ್ಯಾಂಕ್ ಕಾಲೋನಿಯ ಸಮುದಾಯಿಕ ಆಸ್ತಿಗಳನ್ನು ವಶಕ್ಕೆ ಪಡೆಯದೇ ಅಕ್ರಮ ಎಸಗಿದ್ದು, ಇ-ಸ್ವತ್ತಿನಲ್ಲಿ ಕ್ರಮಬದ್ದ ಆಸ್ತಿ ಎಂದು ದಾಖಲೆ ಇಲ್ಲದಿದ್ದರೂ ನಮೂನೆ ಎ ಪ್ರಮಾಣ ಪತ್ರ ನೀಡಿ ಅಕ್ರಮ ಎಸಗಲಾಗಿದೆ. ಜಿ.ಪಂ ಸಿಇಓ ಈ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಯಲ್ಲಮ್ಮ, ಸವಿತ, ಪುಟ್ಟಸ್ವಾಮಿ, ಕರವೇ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಮ್ ಇದ್ದರು.





