ಮಂಡ್ಯ: ಲಾರಿ ಹರಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ನಗರಸಭೆ ಎದುರು ಗುರುವಾರ ಸಂಜೆ ನಡೆದಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ, ಮೂಲತಃ ತಾಲ್ಲೂಕಿನ ಬಿಳಿದೇಗಲು ಗ್ರಾಮದ ಬಿ.ಸಿ. ಚನ್ನಕೇಶವ ಅವರ ಪುತ್ರ ಲೇಖನ್‌ಗೌಡ (11) ಮೃತ ವಿದ್ಯಾರ್ಥಿ.
ಲೇಖನ್‌ಗೌಡ ರಜೆಯ ನಿಮಿತ್ತ ತಮ್ಮ ಸ್ವಗ್ರಾಮ ಬಿಳಿದೇಗಲು ಗ್ರಾಮಕ್ಕೆ ಬಂದಿದ್ದು, ಕಾರ್ಯನಿಮಿತ್ತ ತನ್ನ ತಾತ ಕುಳ್ಳೇಗೌಡನ ಜೊತೆ ಮಂಡ್ಯ ನಗರಕ್ಕೆ ಟಿವಿಎಸ್ ಮೊಪೆಡ್‌ನಲ್ಲಿ ಬಂದಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಅಕ್ಕಿ ತುಂಬಿದ ಲಾರಿ ನಗರಸಭೆ ಎದುರು ಹಿಂಬದಿಯಿಂದ ಟಿವಿಎಸ್ ಮೊಪೆಡ್‌ಗೆ ಡಿಕ್ಕಿ ಹೊಡೆದಿದೆ.ಈ ಸಂದರ್ಭ ತಾತ ಕುಳ್ಳೇಗೌಡ ಅವರು ಎಡಬದಿಗೆ ಬಿದ್ದರೆ, ಲೇಖನ್‌ಗೌಡ ಬೆಂಗಳೂರು-ಮೈಸೂರು ಹೆದ್ದಾರಿಗೆ ಬಿದ್ದಾಗ ಲಾರಿಯ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟನು.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿ ಲಾರಿಯನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಕುಳ್ಳೇಗೌಡ ಅವರನ್ನು ಮಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





