ಮಂಡ್ಯ : ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯದ ವೇಳೆಯಲ್ಲಿ ಗೈರಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ ಎಚ್ಚರಿಕೆ ನೀಡಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಗಿದ್ದು, ಪ್ರತಿ ವಾರ ಆಯಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಾತಿ ಹಾಗೂ ಚಲನ ವಲನ ರಿಜಿಸ್ಟರ್ನಲ್ಲಿ ವಿವರ ಪಡೆದು ಪರಿಶೀಲಿಸುವುದು. ಗೈರು ಹಾಜರಿ ಕಂಡು ಬಂದಲ್ಲಿ ವಿವರ ಪಡೆದುಕೊಳ್ಳುವುದು ಹಾಗೂ ಪ್ರತಿ 15 ದಿನಕೊಮ್ಮೆ ವಿವರವನ್ನು ಜಿಲ್ಲಾ ಪಂಚಾಯತ್ ಗೆ ವರದಿ ಸಲ್ಲಿಸುವುದು. ಎರಡಕ್ಕಿಂತ ಹೆಚ್ಚು ಬಾರಿ ಹಾಜರಾತಿ ಕೊರತೆ ಕಂಡುಬಂದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ದಾಖಲಾತಿಗಳೊಂದಿಗೆ ಶಿಫಾರಸ್ಸು ಮಾಡುವುದು ಎಂದು ನಿರ್ದೇಶಿಸಿದ್ದಾರೆ.
ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಕಚೇರಿ ನಿಯಮಗಳನ್ನು ಪಾಲಿಸದೇ ಇರುವ ಬಗ್ಗೆ ಸಾರ್ವಜನಿಕರುಗಳಿಂದ ಹಲವಾರು ದೂರುಗಳು ಸ್ವೀಕೃತವಾಗುತ್ತಿರುವುದರಿಂದ ಸರ್ಕಾರದ ಸುತ್ತೋಲೆಗಳಲ್ಲಿ ತಿಳಿಸಿರುವ ನಿರ್ದೇಶನಗಳ ಜೊತೆಗೆ ಜಿಲ್ಲಾ, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕೆಳಕಂಡಂತೆ ಶಿಸ್ತುಬದ್ಧವಾಗಿ ಕಚೇರಿ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.
ಹಾಜರಾತಿಗೆ ಇವುಗಳನ್ನು ಪಾಲಿಸುವುದು ಕಡ್ಡಾಯ
- ಸರ್ಕಾರದ ಕಚೇರಿಯ ಪ್ರಾರಂಭದ ಸಮಯ 10.00 ಗಂಟೆಗೆ ಕಚೇರಿಗೆ ಹಾಜರಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸುವುದು.ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ/ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.
- ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿ ಅವಧಿಯಲ್ಲಿ ನೌಕರರು/ಅಧಿಕಾರಿಗಳು ಜಿಲ್ಲಾ/ತಾಲ್ಲೂಕು ಪಂಚಾಯತ್‌ಗಳಲ್ಲಿ ಕರೆಯುವ ಸಭೆಗಳಿಗೆ ಹಾಜರಾಗಬೇಕಾದಲ್ಲಿ ಅಥವಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಕ್ಷೇತ್ರ/ಸ್ಥಳ ಭೇಟಿ ನೀಡಲು ತೆರಳಿದ್ದಲ್ಲಿ ಭೇಟಿಯ ಉದ್ದೇಶ ಸ್ಥಳ ಮತ್ತು ಇತರೆ ಮಾಹಿತಿಯನ್ನು ಮತ್ತು ಅನ್ಯ ಕಾರ್ಯದ ಮೇರೆಗೆ ತಾಲ್ಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿ ಕಚೇರಿಯಿಂದ ತೆರಳಬೇಕಾಗಿದ್ದಲ್ಲಿ. ಚಲನ-ವಲನ ವಹಿಯಲ್ಲಿ ಸಕಾರಣವನ್ನು ವಿವರವಾಗಿ ನಮೂದಿಸಿ. ಸಂಬಂಧಪಟ್ಟ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದು ಕಚೇರಿಯಿಂದ ಹೊರಗೆ ತೆರಳುವುದು.
- ತಾಲ್ಲೂಕು ಪಂಚಾಯಿತಿಗಳಲ್ಲಿ ನಿರ್ವಹಣೆ ಮಾಡಿದ ಚಲನ-ವಲನ ವಹಿಗಳನ್ನು ನೇಮಕ ಮಾಡಲಾಗಿರುವ ಜಿಲ್ಲಾ ಮಟ್ಟದ ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಶೀಲಿಸುವುದು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನಿರ್ವಹಣೆ ಮಾಡಿದ ಚಲನ-ವಲನ ವಹಿಗಳನ್ನು ಪ್ರತಿ ಮಾಹೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸುವುದು.
- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ಪಂಚಾಯಿತಿ ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗಳ ಪ್ರತಿ ಮಾಹೆ ಬಯೋಮೆಟ್ರಿಕ್ ಹಾಜರಾತಿಯ Online (ಆನ್‌ಲೈನ್) ಮಾಹಿತಿಯನ್ನು ಕಡ್ಡಾಯವಾಗಿ ಪಡೆದು ಪರಿಶೀಲಿಸಿ ತದನಂತರ ಪ್ರತಿ ಮಾಹೆ ವೇತನವನ್ನು ಪಾವತಿಸಲು ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸುವುದು.
- ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವಾಹನ ಚಾಲಕರುಗಳು/ಪುರುಷ ಗ್ರೂಪ್-ಡಿ ನೌಕರರು ಬಿಳಿಬಣ್ಣದ ಸಮವಸ್ತ್ರವನ್ನು ಮತ್ತು ಮಹಿಳಾ ಗ್ರೂಪ್-ಡಿ ನೌಕರರು ಸರ್ಕಾರ ನಿಗಧಿಪಡಿಸಿರುವ ಆಕಾಶ-ನೀಲಿ ಬಣ್ಣದ ಸೀರೆಯನ್ನು ಧರಿಸುವುದು.
- ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮಧ್ಯಾಹ್ನದ ಊಟದ ಸಮಯ 1.30 ರಿಂದ 2.30 ಇದ್ದು. ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
- ಸರ್ಕಾರ ಮತ್ತು ಜಿಲ್ಲಾ ಪಂಚಾಯತ್ ಕಚೇರಿಯಿಂದ ಇ-ಮೇಲ್ ಮಾಡಲಾಗುವ ಪತ್ರಗಳು/ಸುತ್ತೋಲೆಗಳು/ಆದೇಶಗಳನ್ನು ಕಡ್ಡಾಯವಾಗಿ ಪ್ರತಿದಿನ ಪರಿಶೀಲಿಸಿ ಕ್ರಮವಹಿಸಿದ ನಂತರ ಪೂರಕ ದಾಖಲಾತಿಗಳೊಂದಿಗೆ ವರದಿಯನ್ನು ಜಿಲ್ಲಾ ಪಂಚಾಯತ್ ಕಚೇರಿಗೆ ನಿಗಧಿತ ಅವಧಿಯಲ್ಲ ಕಳುಹಿಸಲು ಕ್ರಮವಹಿಸುವುದು.
- ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದಿಂದ ನೀಡಿರುವ ಬಿ.ಎಸ್.ಎನ್.ಎಲ್ ಸಿಯುಜಿ ಮೊಬೈಲ್ ಸಿಮ್ ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು, ಮೊಬೈಲ್ ಸ್ವಿಚ್ ಆಫ್ ಮಾಡದೆ. ಸದಾಕಾಲ ಚಾಲನೆಯಲ್ಲಿಟ್ಟಿರುವುದು. ಪಂಚತಂತ್ರ ತಂತ್ರಾಂಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ.ಎಸ್.ಎನ್.ಎಲ್ ಸಿಯುಜಿ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸುವುದು.
- ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ/ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರುವುದು. ತಾಲ್ಲೂಕು/ಗ್ರಾಮ ಪಂಚಾಯತ್ ಕಾರ್ಯಾಲಯಗಳ ಕೊಠಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸುವುದು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಚಾಲನೆಯಲ್ಲಿರುವಂತೆ ನೋಡಿಕೊಳ್ಳುವುದು.
- ಸರ್ಕಾರಿ ಕಚೇರಿಗಳಲ್ಲಿನ ಕಾರ್ಯವಿಧಾನ ಕೈಪಿಡಿ ನಿಯಮಗಳಲ್ಲಿ ತಿಳಿಸಿರುವಂತೆ ತಾಲ್ಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಡ್ಡಾಯವಾಗಿ ದಿನಚರಿ ಮತ್ತು ವಿಷಯ ವಹಿಗಳನ್ನು ನಿರ್ವಹಣೆ ಮಾಡಿ ನಿಗಧಿತ ನಮೂನೆಯಲ್ಲಿ ಪ್ರತಿ ಮಾಹೆ ಘೋಷ್ವಾರೆ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಹಿಯನ್ನು ಪಡೆದುಕೊಳ್ಳುವುದು.
- ಕೇಂದ್ರ/ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು/ಗ್ರಾಮ ಪಂಚಾಯಿತಿಗಳಿಗೆ ನಿಗಧಿಯಾಗಿರುವ ಗುರಿಗೆ ಅನುಗುಣವಾಗಿ ನಿಗಧಿತ ಅವಧಿಯಲ್ಲಿ ಅನುದಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999, 2000ರನ್ವಯ ನಿಯಮಾನುಸಾರ ವೆಚ್ಚ ಮಾಡಿ ಮೇಲಾಧಿಕಾರಿಗಳು ಕರೆಯುವ ಸಭೆಗಳಿಗೆ ಪೂರಕ ಮಾಹಿತಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವುದು.
ಸರ್ಕಾರಿ ಕಚೇರಿಗಳಲ್ಲಿ ಕಾರ್ಯವಿಧಾನಗಳನ್ನು ಮಾಡಲು ವಿಫಲರಾದ ಅಧಿಕಾರಿ ಮತ್ತು ನೌಕರರುಗಳ ವಿರುದ್ಧ ಶಿಸ್ತು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





