ಮಂಡ್ಯ: ಅಂಬರೀಶ್ ಅವರ ಅವಧಿಯಲ್ಲಿ ಆದ ಕೆಲಸಗಳ ಬಗ್ಗೆ ಕೇಳಿದಾಗ ತೃಪ್ತ ಮನೋಭಾವ ಮೂಡುತ್ತದೆ ಎಂದು ಮಾಜಿ ಸಂಸದೆ ಸುಮಲತ ಅಂಬರೀಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಮೇಲಂತಸ್ಥಿನ ಕಟ್ಟಡಕ್ಕೆ ಅವರು ಅನುದಾನ ನೀಡಿದ ಹಿನ್ನಲೆ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಂಬರೀಶ್ ಅವರು ಸಣ್ಣ ಸಮುದಾಯ ಭವನದಿಂದ ಹಿಡಿದು ಬೃಹತ್ ಅಭಿವೃದ್ಧಿ ಕಾರ್ಯಗಳ ವರೆಗೂ ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ಮುಂದುವರೆಸಿ ಅವರ ಕೆಲಸದಲ್ಲಿ ಅಸಂಪೂರ್ಣತೆಯಿದ್ದರೆ ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನನ್ನ ಲೋಕಸಭಾ ಸದಸ್ಯೆ ಅವಧಿಯಲ್ಲಿ ಪ್ರಯತ್ನಗಳನ್ನು ಮಾಡಿದ್ದೇನೆ ಎಂದರು.
ಮಾಡಿದ ಕೆಲಸಗಳಲ್ಲಿ ಅಂಬರೀಶ್ ಅವರು ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಮೊದಲು ಅನುದಾನ ನೀಡಿದ್ದು, ನನ್ನ ಲೋಕಸಭಾ ಸದಸ್ಯತ್ವದ ಅವಧಿಯ ಕೊನೆಯಲ್ಲಿ ಪತ್ರಕರ್ತರ ಸಂಘವು ಸಹಾಯ ಕೋರಿ ಬಂದಾಗ ಮೇಲಂತಸ್ಥಿನ ಕಟ್ಟಡಕ್ಕೆ ಅನುದಾನ ನೀಡಿದ್ದು ಸಂತಸ ತಂದಿದೆ ಎಂದರು.
ಅಂಬರೀಶ್ ಅವರ ರೀತಿಯ ಮಾತಿನ ದಾಟಿ ದೇಶದಲ್ಲಿನ ಬೇರಾವ ರಾಜಕಾರಣಿಗೂ ಇರಲಿಲ್ಲ, ಆ ದಾಟಿಯಲ್ಲಿ ಪತ್ರಕರ್ತರೊಂದಿಗೆ ಬೇರೆ ರಾಜಕಾರಣಿ ಮಾತನಾಡಿದರೆ ಅವರ ಪ್ರತಿಕ್ರಿಯೆಯನ್ನು ಊಹೆಯೂ ಮಾಡಿಕೊಳ್ಳಲಾಗದು. ಅವರ ಮಾತಿನ ರೀತಿಯನ್ನು ಪ್ರೀತಿಯಿಂದ ಅರ್ಥ ಮಾಡಿಕೊಳ್ಳುತ್ತಿದ್ದ ಪತ್ರಕರ್ತರೊಂದಿಗೆ ಅಂಬರೀಶ್ ಅವರಿಗೆ ವಿಶೇಷವಾದ ಸಂಬಂಧವಿದೆ ಎಂದು ನುಡಿದರು.
ಅಧಿಕಾರ ಇರಲಿ ಇಲ್ಲದಿರಲಿ, ಪತ್ರಕರ್ತರ ಸಂಘಕ್ಕೆ ಕಡೆಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ಇದಕ್ಕೆ ಅಂಬರೀಶ್ ಅವರೊಂದಿಗೆ ಪತ್ರಕರ್ತರು ಹೊಂದಿದ್ದ ಪ್ರೀತಿ ವಿಶ್ವಾಸವನ್ನು ನಿಭಾಯಿಸಿಕೊಂಡು ಮುನ್ನಡೆಸುತ್ತೇನೆ. ನನ್ನ ಕೈಲಾದ ಸಹಕಾರವನ್ನು ಪತ್ರಕರ್ತರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷ ಪಿ.ಜೆ.ಚೈತನ್ಯಕುಮಾರ್, ಉಪಾಧ್ಯಕ್ಷ ನವೀನ್‌ಕುಮಾರ್, ಖಜಾಂಚಿ ನಂಜುಂಡಸ್ವಾಮಿ ಇತರರಿದ್ದರು.





