Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಂಡ್ಯ| ಅಧಿಕಾರಿಗಳು ಕೆಲಸದಲ್ಲಿ ನಿರಾಸಕ್ತಿ ತೋರಿದರೆ ಕ್ರಮ: ಡಿಸಿ ಕುಮಾರ ಎಚ್ಚರಿಕೆ

ಮಂಡ್ಯ: ಸರ್ಕಾರ ಹಾಗೂ ಸಾರ್ವಜನಿಕ ಕೆಲಸದಲ್ಲಿ ನಿರಾಸಕ್ತಿ ತೋರುವಂತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಸಕಾಲ ಸೇವೆಯಲ್ಲಿ ಸಿಂಧುತ್ವ ಅರ್ಜಿಗಳನ್ನು ನಿಗಧಿತ ಸಮಯಕ್ಕೆ ವಿಲೇವಾರಿ ಮಾಡದೆ ವಿಳಂಬ ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಎಚ್ಚರಿಕೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಸಕಾಲ ಯೋಜನೆಯು ನಾಗರೀಕ ಸೇವೆಗಳನ್ನು ನಿಗಧಿತ ಕಾಲದೊಳಗೆ ಪಡೆಯಲು ಸಹಾಯ ಮಾಡುವ ಒಂದು ಯೋಜನೆಯಾಗಿದೆ. ಅಧಿಕಾರಿಗಳು ವಿಳಂಬ ಮಾಡದೆ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಕಾಲ ಸೇವೆಯಲ್ಲಿ ಸ್ವೀಕೃತವಾಗಿರುವ ಸಿಂಧುತ್ವ ಅರ್ಜಿಗಳ ಪೈಕಿ ಜಾತಿ ಪರಿಶೀಲನಾ ಪ್ರಮಾಣ ಪತ್ರ ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ಅವಧಿ ಮೀರಿ ಬಾಕಿ ಉಳಿದಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಜಿಲ್ಲಾಡಳಿತದ ಗಮನಕ್ಕೆ ಕಂಡುಬಂದಿದೆ. ಜೊತೆಗೆ ಅಧಿಕಾರಿಗಳು ಸಕಾಲದ ರ‍್ಯಾಕಿಂಗ್ ಪ್ರಗತಿಯನ್ನು ಸಾಧಿಸುತ್ತಿಲ್ಲ. ಕೂಡಲೇ ಬಾಕಿ ಉಳಿದಿರುವ ಸಿಂಧುತ್ವ ಅರ್ಜಿಗಳನ್ನು ವಿಲೇವಾರಿ ಮಾಡಿ ಮಾಹಿತಿಯನ್ನು ಸಲ್ಲಿಸಬೇಕು ಎಂದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಸಕಾಲದಲ್ಲಿ ಬರುವ ಸಾರ್ವಜನಿಕ ಸೇವೆಯನ್ನು ನೀಡಬೇಕು. ಯಾವುದೇ ರೀತಿಯ ಅಸಡ್ಡೆ ತೋರಿಸಿದರೆ ನೋಟೀಸ್ ಜಾರಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags: