Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮಂಡ್ಯ: ಟಿ.ಇ.ಟಿ ಪರೀಕ್ಷೆಗೆ 3892 ವಿದ್ಯಾರ್ಥಿಗಳು ನೋಂದಣಿ: ರೋಹಿಣಿ

ಮಂಡ್ಯ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ(ಟಿ.ಇ.ಟಿ) ಮಂಡ್ಯ ಜಿಲ್ಲೆಯಲ್ಲಿ 3892 ಅಭ್ಯರ್ಥಿಗಳು  ನೊಂದಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಡಾ ರೋಹಿಣಿ ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಪೂರ್ವಭಾವಿ ಸಭೆ ಕುರಿತು ಮಾತನಾಡಿದ ಅವರು, ಪರೀಕ್ಷೆಯು ಜೂನ್ 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ 2ನೇ ಪತ್ರಿಕೆ ಪರೀಕ್ಷೆ ನಡೆಯಲಿದ್ದು 11 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. 1ಕ್ಕೆ 1346 ಅಭ್ಯರ್ಥಿಗಳು ಮತ್ತು ಪತ್ರಿಕೆ-2ಕ್ಕೆ 2546 ಅಭ್ಯರ್ಥಿಗಳು ಒಟ್ಟು 3892 ಅಭ್ಯರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಪರೀಕ್ಷೆಯು ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ ಸುತ್ತಳತೆಯಲ್ಲಿ 144ನೇ ಕಲಂ ಜಾರಿಗೊಳಿಸಬೇಕು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಬೇಕು ಎಂದರು.

ಪರೀಕ್ಷೆ ಪ್ರಾರಂಭವಾಗುವ ಮೊದಲು ಒಂದು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು ಕಡ್ಡಾಯವಾಗಿ ಪ್ರವೇಶಪತ್ರವನ್ನು ಹಾಗೂ ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿಯೊಂದಿಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ತರಬೇಕು ಎಂದರು.

ಪರೀಕ್ಷಾರ್ಥಿಗಳು ಒಂದು ಸಲ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಿದ ನಂತರ ಎರಡು ಪತ್ರಿಕೆಗಳ ಪರೀಕ್ಷೆ ಮುಗಿದ ನಂತರ ಮಾತ್ರವೇ ಹೊರಗೆ ಹೋಗಲು ಅವಕಾಶವಿರುತ್ತದೆ. ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ರೀತಿಯ ಕೈಗಡಿಯಾರ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ವೈಟ್ ಫ್ಲೂಯಿಡ್, ವೈರ್ ಲೆಸ್ ಸೆಟ್ಸ್, ಕ್ಯಾಲ್ಕುಲೇಟರ್ ಇತ್ಯಾದಿ ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಪರೀಕ್ಷಾ ದಿನವು ಭಾನುವಾರವಾಗಿರುವುದರಿಂದ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳುವ ಮತ್ತು ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಖಜಾನೆಯಲ್ಲಿ ಸಂರಕ್ಷಿಸಿ ಇಡುವ ಸಂದರ್ಭಗಳಲ್ಲಿ ಖಜಾನಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿರುವಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ವೈದ್ಯರು / ಆರೋಗ್ಯ ಸಿಬ್ಬಂದಿಗಳನ್ನು ನೇಮಕ ಮಾಡುವುದು ಕೇಂದ್ರಗಳ ಸುತ್ತಮುತ್ತ ಸ್ವಚ್ಛತೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯ, ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್ ಶಿವರಾಮೇಗೌಡ, ಡಯಟ್ ಪ್ರಾಂಶುಪಾಲರಾದ ಪುರುಷೋತ್ತಮ, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೇಮಲತಾ ಸೇರಿದಂತೆ ಇನ್ನಿತರ ಶಿಕ್ಷಕರುಗಳು ಉಪಸ್ಥಿತರಿದ್ದರು.

Tags: