Mysore
20
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮಂಡ್ಯ: ಫುಡ್‌ ಪಾಯ್ಸನಿಂಗ್‌ನಿಂದ 29 ವಿದ್ಯಾರ್ಥಿಗಳು ಅಸ್ವಸ್ಥ, ಓರ್ವ ಬಲಿ

ಮಂಡ್ಯ: ಅನಾಥಾಶ್ರಮವೊಂದರಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಅದರಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿರುವ ಆಘಾತಕಾರಿ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿ 6ನೇ ತರಗತಿಯ ಕೆರ್ಲಾಂಗ್‌ (13) ಎನ್ನಲಾಗಿದೆ.

ಹೋಳಿ ಹಬ್ಬದ ಅಂಗವಾಗಿ ಶುಕ್ರವಾರ ಉದ್ಯಮಿಯೊಬ್ಬರು ಆಯೋಜಿಸಿದ್ದ ಸಮಾರಂಭದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಉಳಿದ ಊಟವನ್ನು ಅನಾಥಾಶ್ರಮಕ್ಕೆ ನೀಡಲಾಗಿತ್ತು. ಅನಾಥಾಶ್ರಮದ ಮಕ್ಕಳು ಊಟ ಸೇವಿಸಿದ ನಂತರ ಅವರಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಹಬ್ಬದ ಸಮಾರಂಭದಲ್ಲಿ ಊಟ ಸೆವಿಸಿದ್ದ ಕೆಲ ಸಾರ್ವಜನಿಕರಲ್ಲೂ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಮಾಹಿತಿ ದೊರೆತಿದ್ದು, ಊಟದಲ್ಲಿ ವಿಷ ಇತ್ತೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಈ ಘಟನೆ ಕುರಿತಾಗಿ ಮಳವಳ್ಳಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಬಗ್ಗೆ ಡಿಎಚ್‌ಓ ಡಾ.ಮೋಹನ್‌ ಪ್ರತಿಕ್ರಿಯಿಸಿದ್ದು, ಹೋಳಿ ಹಬ್ಬದ ಪ್ರಯುಕ್ತ ಮಾರ್ವಾಡಿಗಳು ಶುಕ್ರಾವರ ರಾತ್ರಿ ಊಟ ಮಾಡಿಸಿದ್ದರು. ಈ ಊಟ ಸೇವಿಸಿದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ವಾಂತಿ, ಭೇದಿ ಶುರುವಾಗಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಯ ನಂತರ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಆದರೆ, ಓರ್ವ ವಿದ್ಯಾರ್ಥಿಯೊಬ್ಬ ದಿಡೀರ್‌ ಮೃತಪಟ್ಟಿದ್ದಾನೆ. ಪೋಸ್ಟ್‌ ಮಾರ್ಟಮ್‌ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಲ್ಲಿ 27 ಮಂದಿ ಹೊರ ರಾಜ್ಯದವರಾದರೆ, ಇಬ್ಬರು ಸ್ಥಳೀಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.

Tags:
error: Content is protected !!