ಮದ್ದೂರು: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಮದ್ಯಪಾನ ಮಾಡಿ ಮನಬಂದಂತೆ ಕಾರು ಚಾಲನೆ ಮಾಡಿದ ಚಾಲಕನಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ 69000 ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದ ಧನಂಜಯ ಎಂಬಾತನಿಗೆ ನ್ಯಾಯಾಲಯ ದಂಡ ವಿಧಿಸಿದೆ. ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಕಳೆದ ಭಾನುವಾರ ( ಮಾರ್ಚ್ 17 ) ಸಂಜೆ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ತನ್ನ ಎರ್ಟಿಗಾ ಕಾರು ಚಾಲನೆ ಮಾಡಿದ್ದ ಧನಂಜಯ ಇತರೆ ವಾಹನ ಸವಾರರಿಗೆ ಆತಂಕ ಸೃಷ್ಟಿಸಿದ್ದ.
ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಇದನ್ನು ಗಮನಿಸಿ ಪರಿಶೀಲಿಸಿದಾಗ ಧನಂಜಯ ಸೇರಿದಂತೆ ಕಾರಿನಲ್ಲಿದ್ದ ಇತರೆ ಐವರೂ ಸಹ ಮದ್ಯಪಾನ ಮಾಡಿರುವುದು ತಿಳಿದುಬಂದಿದೆ. ಇನ್ನು ತಪಾಸಣೆ ವೇಳೆ ಪೊಲೀಸರ ಜತೆ ಸಹ ಅಸಭ್ಯವಾಗಿ ವರ್ತಿಸಿದ್ದು, ಸಾರ್ವಜನಿಕ ದೂರಿನ ಅನ್ವಯ ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಈ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಿಯಾಂಕ ಕಾರು ಚಾಲಕ ಧನಂಜಯ ಹಾಗೂ ಆತನ ಸ್ನೇಹಿತರಿಗೆ ದಂಡ ವಿಧಿಸಿದ್ದಾರೆ.





