ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೆಗ್ಗಡೆಹಳ್ಳಿ ಗ್ರಾಮದ ನಿವಾಸಿ ದೀಪಕ್ ಅವರ ಪುತ್ರ ಎಚ್.ಡಿ.ತೇಜಸ್ ಎಂಬಾತನೇ ಮೃತ ಯುವಕ.
ಬೆಂಗಳೂರಿನ ಹೆಗ್ಗನಹಳ್ಳಿ ಕ್ರಾಸ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಭಾನುವಾರ ತನ್ನ ಹನ್ನೊಂದು ಮಂದಿ ಸ್ನೇಹಿತರೊಂದಿಗೆ ಟೆಂಪೊ ಟ್ರಾವಲರ್‌ನಲ್ಲಿ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದನು. ಕಾವೇರಿ ನದಿಯಲ್ಲಿ ಈಜಾಡಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನುರಿತ ಸ್ಥಳೀಯ ಈಜುಗಾರರ ಸಹಾಯದಿಂದ ಯುವಕನ ಮೃತದೇಹವನ್ನು ಸೋಮವಾರ ಬೆಳಿಗ್ಗೆ ನದಿಯಿಂದ ಹೊರತೆಗೆಯಲಾಯಿತು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




