ಮಂಡ್ಯ : ಗ್ರಾಮ ಪಂಚಾಯತ್ ಯೋಜನೆ ಹಾಗೂ ಕಾರ್ಯಕ್ರಮಗಳು ಮಹಿಳಾ ಮತ್ತು ಮಕ್ಕಳ ಸ್ನೇಹಿಯಾಗಿರಬೇಕು, ಗ್ರಾ.ಪಂ. ಆಡಳಿತದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಕೊಳ್ಳಬೇಕು, ಜೊತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಜಿ.ಪಂ. ಸಿಇಓ ನಂದಿನಿ ಅವರು ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಶುಕ್ರವಾರ ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಚಂದಗಾಲು ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಗ್ರಾಮ ಪಂಚಾಯತ್ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಅವರು ಇ-ಹಾಜರಾತಿ, ಇ-ಸ್ವತ್ತು ವಿತರಣೆ, ಸಕಾಲ, ನರೇಗಾ ಯೋಜನೆಯ ಕಡತಗಳ ನಿರ್ವಹಣೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಗ್ರಾ.ಪಂ. ಗ್ರಂಥಾಲಯದ ಪೀಠೋಪಕರಣಗಳ ಪರಿಶೀಲನೆ ಇತ್ತೀಚೆಗೆ ಜಿಲ್ಲೆಯ 257 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಸರ್ಕಾರದ ನಿರ್ದೇಶನದಂತೆ ಪೀಠೋಪಕರಣಗಳನ್ನು ವಿತರಿಸಲಾಗಿದ್ದು, ಕಿರಂಗೂರು ಗ್ರಾಮ ಪಂಚಾಯತ್ ನ ಗ್ರಂಥಾಲಯದಲ್ಲಿ ಅವುಗಳನ್ನು ಪರಿಶೀಲಿಸಿ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹ ಹಾಗೂ ಲಭ್ಯವಿರುವ ಕಂಪ್ಯೂಟರ್ ಗಳ ಬಗ್ಗೆ ಮಾಹಿತಿ ಪಡೆದರು.
ಗ್ರಾ.ಪಂ. ಅಬಿಲೇಖಾಲಯಕ್ಕೆ ಮೆಚ್ಚುಗೆ
ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾ.ಪಂ. ಕಚೇರಿಯಲ್ಲಿ ಹಾಲಿ ಇರುವ ವ್ಯವಸ್ಥೆಯಲ್ಲಿಯೇ ಕಡತಗಳನ್ನು ವರ್ಗೀಕರಿಸಿ ಸಂಗ್ರಹಿಸಲು ತೆರೆಯಲಾಗಿರುವ ಅಬಿಲೇಖಾಲಯವನ್ನು ಪರಿಶೀಲಿಸಿದ ಸಿಇಓ ಅವರು ಪಿಡಿಓ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾ.ಪಂ. ಇಓ ಎ.ಬಿ. ವೇಣು, ಕಿರಂಗೂರು ಗ್ರಾ.ಪಂ. ಅಧ್ಯಕ್ಷೆ ರೂಪ ಆರ್, ಚಂದಗಾಲು ಗ್ರಾಮ ಪಂಚಾಯತ್ ನ ಪಿಡಿಓ ವಿದ್ಯಾ, ಕಿರಂಗೂರು ಗ್ರಾಮ ಪಂಚಾಯತ್ ನ ಪಿಡಿಓ ಪ್ರಶಾಂತ್ ಬಾಬು ಸೇರಿದಂತೆ ಇತರರು ಹಾಜರಿದ್ದರು.





