ಮದ್ದೂರು : ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಧರ್ಮೀಯರು ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ, ಸಿಟ್ಟಿಗೆದ್ದ ಯುವಕರ ಗುಂಪು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದರಿಂದಾಗಿ ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ರಾಮ್ ರಹೀಂ ನಗರದಲ್ಲಿ ಭಾನುವಾರ ರಾತ್ರಿ ಜರುಗಿದೆ.
ಕಲ್ಲು ತೂರಾಟದಲ್ಲಿ ರೋಜ, ಜಯಂತ್, ಗಂಗ, ಖಾಜಿಲ್ ಸೇರಿದಂತೆ ೧೫ ಮಂದಿ ಯುವಕರು ಹಾಗೂ ಗುಂಪನ್ನು ಚದುರಿಸಲು ಆಗಮಿಸಿದ್ದ ೧೦ ಮಂದಿ ಪೊಲೀಸರು ಗಾಯಗೊಂಡಿದ್ದು, ಗಾಯಗೊಂಡವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ
ಚನ್ನೇಗೌಡ ಬಡಾವಣೆ ಹಾಗೂ ರಾಮ್ ರಹೀಂ ನಗರದ ಯುವಕರು ಸೇರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಭಾನುವಾರ ಸಂಜೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಮೆರವಣಿಗೆ ಮೂಲಕ ತೆರಳುತ್ತಿದ್ದಾಗ ಅನ್ಯಧರ್ಮಿಯರು ಮಸೀದಿ ಮೇಲಿಂದ ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ಗಣೇಶ ಮೂರ್ತಿ ಹಾಗೂ ಮೆರವಣಿಗೆ ಮೇಲೆ ಎಸೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೆರವಣಿಗೆಯಲ್ಲಿ ತೆರಳುತ್ತಿದ್ದ ಯುವಕರು ಅನ್ಯಧರ್ಮೀಯರು ಎಸೆದ ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ತೆಗೆದುಕೊಂಡು ಪ್ರತಿಯಾಗಿ ಎಸೆದಿದ್ದಾರೆ.
ಮಸೀದಿಯ ಮುಂಭಾಗದಲ್ಲಿ ಡಿಜೆ ಬಳಸಿ ನೃತ್ಯ ಮಾಡುತ್ತಿದ್ದಾಗ ಅನ್ಯಧರ್ಮೀಯರು ಗಣೇಶ ಮೂರ್ತಿ ಹಾಗೂ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರಿಂದಾಗಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಷಯ ಅರಿತು ಜಿಲ್ಲಾ ಪೊಲೀಸ್ ಇಲಾಖೆ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಗಿ, ಎರಡು ಗುಂಪುಗಳನ್ನು ಚದುರಿಸಲು ಪ್ರಯತ್ನಿಸಿದಾಗ ಪೊಲೀಸರ ಮೇಲೂ ಗುಂಪು ಕಲ್ಲು ತೂರಾಟ ನಡೆಸಿದ್ದು, ೧೦ ಮಂದಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ.
ಇದರಿಂದಾಗಿ ಕೆಲ ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಸ್ಥಳದಲ್ಲಿದ್ದಂತಹ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಗಣೇಶ ಮೂರ್ತಿ ಮೆರವಣಿಗೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಗಲಭೆ ಖಂಡಿಸಿ ಹಿಂದೂ-ಮುಸ್ಲಿಂ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಮದ್ದೂರು ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಮೂರು ಕೆಎಸ್‌ಆರ್‌ಪಿ ತುಕಡಿ, ಎರಡು ಆರ್‌ಎಫ್ ತುಕಡಿ, ನಾಲ್ಕು ಡಿಆರ್ ತುಕಡಿಗಳು ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.
ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಕಳೆದ ವರ್ಷ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಸೀದಿ ಬಳಿಯೇ ಕಲ್ಲುತೂರಾಟ ನಡೆದು, ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಓ ಗಲಭೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು.





