ಶಿಂಷಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ

ಮದ್ದೂರು: ಬನ್ನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 18 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಬನ್ನಹಳ್ಳಿ ಏತ ನೀರಾವರಿ ಪಕ್ಕದಲ್ಲಿ ಶಿಂಷಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಕಾಲ ಕಾಮಗಾರಿ ಸ್ಥಗಿತವಾಗಿತ್ತು. ಈಗಾಗಲೇ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಇನ್ನು ಎರಡೂವರೆ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಸುಮಾರು ಎರಡೂವರೆ ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸಲಾಗುವುದು ಎಂದರು.

ಈ ಯೋಜನೆಯಿಂದ ಅಕ್ಕಪಕ್ಕದ ಗ್ರಾಮಗಳಲ್ಲಿರುವ ಬೋರ್‌ವೆಲ್‌ಗಳಿಗೆ ಅಂತರ್ಜಲ ಮಟ್ಟ ವೃದ್ಧಿಯಾಗಿ ವ್ಯವಸಾಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಾಳೆಯಿಂದ ನಾಲೆಗಳಿಗೆ ನೀರು:

ಕೆಆರ್‌ಎಸ್ ಅಣೆಕಟ್ಟೆಯಿಂದ ನಾಳೆಯಿಂದ ( ಜುಲೈ 10 ) ನಾಲೆಗಳ ಮೂಲಕ ನೀರು ಬಿಡುತ್ತಿದ್ದು, ಬಹುತೇಕ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಸೂಚನೆ ನೀಡಲಾಗಿದೆ. ಇದು ಜನ-ಜಾನುವಾರಗಳ ಕುಡಿಯುವ ನೀರಿಗೆ ಮಾತ್ರ. ನಂತರದಲ್ಲಿ ಹೆಚ್ಚು ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟು ತುಂಬಿದರೆ ರೈತರ ವ್ಯವಸಾಯಕ್ಕೆ ನೀರು ಕೊಡಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಲ್.ಜಯರಾಮ, ಟಿಪ್ಪರ್ ಕೃಷ್ಣ, ಸುಂದ್ರಮ್ಮ, ಶಿವಣ್ಣ, ಮುಖಂಡರಾದ ಶಿವಲಿಂಗೇಗೌಡ, ದೇವರಾಜು, ಪಾಪಣ್ಣ, ತಿಮ್ಮೇಗೌಡ, ದಿಗಂತ್, ಶಿವರಾಮ, ಶಶಿ, ಹರೀಶ, ವಿಜಯ್, ಮಹೇಶ, ಕಾವೇರಿ ನೀರಾವರಿ ನಿಗಮದ ಅಽಕಾರಿಗಳಾದ ನಂಜುಂಡೇಗೌಡ, ನಾಗರಾಜು ಹಾಜರಿದ್ದರು.