ಮಂಡ್ಯ: ಲೋಕಸಭೆ ಚುನಾವಣೆಯ ಫಳಿತಾಂಶ ಇಂದು(ಜೂನ್ ೪) ಪ್ರಕಟವಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಗೆದ್ದಿದ್ದು, ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವರು, ಮಂಡ್ಯ ಜಿಲ್ಲೆಯಲ್ಲಿ ನಾವು ಸೋಲು ಗೆಲುವುಗಳನ್ನು ನೋಡಿದ್ದೇವೆ . ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ತಿಳಿಸಿದ್ದಾರೆ.
ಹಿಂದೆ ಜೆ.ಡಿ.ಎಸ್ ನ ಎಂಟೂ ಜನರನ್ನು ಗೆಲಿಸಿಕೊಟ್ಟು ನಂತರ ಐದು ವರ್ಷ ನಿರಾಸೆ ಹೊಂದಿದ್ದ ಜನ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಏಳು ಶಾಸಕರನ್ನು ಗೆಲ್ಲಿಸಿದ್ದಾರೆ.
ಒಂದು ವರ್ಷ ನಾವೂ ಅವರ ಸೇವೆಯನ್ನು ಮಾಡಿದ್ದೇವೆ. ನಮ್ಮ ಪಕ್ಷ, ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟರೂ, ಈ ಲೋಕಸಭಾ ಚುನಾವಣೆಯಲ್ಲಿ ತೀರ್ಪನ್ನು ನಮ್ಮ ವಿರುದ್ಧ ಕೊಟ್ಟಿದ್ದಾರೆ ಜಿಲ್ಲೆಯಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದಿದ್ದಾರೆ.
ಅವರು ಏನು ಭರವಸೆ ಕೊಟ್ಟಿದ್ದಾರೆ ರಾಷ್ಟ್ರಮಟ್ಟದಿಂದ ನಾವು ಏನೇನೋ ಭರವಸೆಗಳನ್ನ ತರುತ್ತೇವೆ ಎಂದು ಹೇಳಿದ್ದಾರೆ ನಾವು ಸಂತೋಷವಾಗಿ ಅವು ಈಡೇರಿಸೋದನ್ನ ಕಾದುನೋಡುತ್ತೇವೆ..
ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮ ಸಮೀಕ್ಷೆ ಸುಳ್ಳಾಗಿದೆ
ರಾಜ್ಯದ ಜನರು ನೀಡಿದ ತೀರ್ಪು ಸ್ವಾಗತಿಸುತ್ತೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಒಂದು ಸ್ಥಾನ ಗೆದ್ದಿತ್ತು .ಇದೀಗ 9 ಸ್ಥಾನ ಜಯಿಸಿದ್ದೇವೆ. ಇದು ಕಾಂಗ್ರೇಸ್ ಪಕ್ಷವನ್ನು ಜನ ಕಳೆದ ಬಾರಿಗಿಂತ ಹೆಚ್ಚು ಮೆಚ್ಚಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕೃಷಿ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟ ಉತ್ತಮ ಸಾಧನೆ ಮಾಡಿದೆ . ಮಾಧ್ಯಮಗಳ ಸಮೀಕ್ಷೆ ಸುಳ್ಳಾಗಿದೆ . ಜನರಿಗೆ ಕಾಂಗ್ರೇಸ್ ನೇತೃತ್ವದ ಮೈತ್ರಿ ಒಕ್ಕೂಟದ ಬಗ್ಗೆ ಒಲವು ಹೆಚ್ಚುತ್ತಿದೆ ಮುಂದೊಂದು ದಿನ ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.