ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಆಹಾರದ ಕುರಿತು ಚರ್ಚೆ ಆಗ್ರಹಗಳು ನಡೆಯುತ್ತಿದ್ದು, ಮಾಂಸಾಹಾರ ನೀಡುವ ಮೂಲಕ ಎಲ್ಲ ಸಮಾಜದ ಜನರಿಗೆ ಸಮಾನ ಆಹಾರ ಕಲ್ಪಿಸಬೇಕು ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಉಗ್ರನರಸಿಂಹೇಗೌಡ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ಭಾಷೆ ಮುಖ್ಯವೋ ಆಹಾರ ಮುಖ್ಯವೋ ಎಂಬ ಪ್ರಶ್ನೆಗಳೂ ಮೂಡುತ್ತಿದ್ದು, ಭಾಷೆಯ ಮೊದಲೇ ಆಹಾರದ ಅನ್ವೇಷಣೆಯಾಗಿದೆ. ಮನುಷ್ಯ ಹುಟ್ಟಿನಿಂದಲೂ ಸಸ್ಯಹಾರಿಯೂ ಮಾಂಸಹಾರಿಯೂ ಆಗಿದ್ದು, ಎರಡನ್ನು ಸಮನಾಗಿ ನೋಡಬೇಕಾದದ್ದು ಸಾಹಿತ್ಯದ ಮನೋಧರ್ಮವಾಗಿದೆ ಎಂದರು.
ಕಳೆದ ೮೬ ಸಾಹಿತ್ಯ ಸಮ್ಮೇಳನದಲ್ಲಿಯೂ ಮಾಂಸಾಹಾರ ಸೇರಿಸದೇ ಇರುವುದು ಸಾಹಿತ್ಯ ಪರಿಷತ್ ಮತ್ತು ಸರ್ಕಾರದ ಅವಿವೇಕತನವಾಗಿದ್ದು, ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಸಮ್ಮೇಳನಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನು ಉಣಬಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಹದೇವಶಂಕರ ಹಾಗೂ ಶಂಭುಲಿಂಗಸ್ವಾಮಿ ಇದ್ದರು.