Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಾಹಿತ್ಯ ಸಮ್ಮೇಳನ: ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಸಮ್ಮೇಳನಾಧ್ಯಕ್ಷರ ಆಯ್ಕೆ; ಮಹೇಶ್‌ ಜೋಶಿ

ಮಂಡ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾಯಿತನಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಸಾರ್ವಜನಿಕ ಅಭಿಪ್ರಾಯ ಕಲೆ ಹಾಕಲು ತೆರೆದ ಕಿವಿಗಳಿಂದ ಚರ್ಚೆ ಆಲಿಸುವ ಕರ್ತವ್ಯ ನನ್ನ ಮೇಲಿದೆ. ಸಮ್ಮೇಳನಾಧ್ಯಕ್ಷರನ್ನು ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯು ತನ್ನ ಚೌಕಟ್ಟಿನ ಒಳಗೆ ಕಲಸ ಮಾಡಬೇಕಿದ್ದು, ಪರಿಷತ್ತಿನ ನಿಬಂಧನೆಗಳಲ್ಲಿ ಸಮ್ಮೇಳನಾಧ್ಯಕ್ಷರಾಗಿ ಯಾರನ್ನು ಮಾಡಬೇಕು, ಯಾರನ್ನು ಮಾಡಬಾರದು ಎಂಬುದನ್ನು ತಿಳಿಸಿಲ್ಲ. ಸಮಾಜದಲ್ಲಿನ ಅಭಿಪ್ರಾಯಗಳನ್ನು ಕೇಳಿ, ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಬಂಧ ನಡೆಯುತ್ತಿರುವ ಚರ್ಚೆಗಳನ್ನು ಕಾರ್ಯಕಾರಿ ಸಮಿತಿಯಲ್ಲಿ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಅ.ಭಾ.ಕ.ಸಾಹಿತ್ಯ ಸಮ್ಮೇಳನಗಳ ಈ ಹಿಂದಿನ ಸಮ್ಮೇಳನಾಧ್ಯಕ್ಷ ಆಯ್ಕೆ ಸಂಬಂದ ಭಿನ್ನ ಅಭಿಪ್ರಾಯಗಳು ಬಂದಿದ್ದು, ಈಗ ಆಗುತ್ತಿರುವುದು ಹೊಸದೇನಲ್ಲ, ಸಮ್ಮೇಳನಾಧ್ಯಕ್ಷರ ಆಯ್ಕೆ ವಿರೋಧಿಸಿ ಪರ್ಯಾಯ ಸಮ್ಮೇಳನಗಳು ನಡೆದಂತಹ ಉದಾಹರಣೆಗಳನ್ನು ಮುಂದಿಟ್ಟರು.

ಸಮ್ಮೇಳನಾಧ್ಯಕ್ಷ ಆಯ್ಕೆ ಸಂಬಂಧ ಸಾಹಿತ್ಯೇತರರ ಆಯ್ಕೆ ಚರ್ಚೆಯನ್ನು ಸಾಹಿತ್ಯ ಪರಿಷತ್ತು ಪ್ರಾರಂಭ ಮಾಡಿಲ್ಲ, ನವೆಂಬರ್ ೧೨ರಂದು ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದ್ದು, ಈ ಸಂಬಂಧ ಸಂಪೂರ್ಣವಾಗಿ ಮತ್ತು ಆಳವಾಗಿ ವಿಮರ್ಶೆ ಮಾಡಿ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಿ, ಸದರಿ ಚರ್ಚೆಗೆ ಇತಿಶ್ರೀ ಆಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

ಸಾಹಿತ್ಯ ಪರಿಷತ್ತಿಗೆ ಘನತೆ ಗೌರವ ಮುಖ್ಯ, ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಭಿ ಆಗುವುದಿಲ್ಲ, ಸಾರ್ವಜನಿಕ ವಲಯದಲ್ಲಿ ಹೆಸರುಗಳನ್ನು ಸಲಹೆ ರೂಪದಲ್ಲಿ ನೀಡಬಹುದಷ್ಟೆ, ನಾವೇ ಹೋಗಿ ಸಾಹಿತಿಗಳ ವರ್ಚಸ್ಸು, ಕೊಡುಗೆ ಗಮನಿಸಿ ಚರ್ಚೆ ಮಾಡಿ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಹ್ವಾನ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಮಹಿಳಾ ಸಮ್ಮೇಳನಾಧ್ಯಕ್ಷರಾಗನ್ನಾಗಿಸಲು ಡಾ.ಲತಾ ರಾಜಶೇಖರ್, ಡಾ.ಬಿ.ಟಿ.ಲಲಿತಾ ನಾಯಕ್, ಇಂದಿರಾ ಕೃಷ್ಣಪ್ಪ, ಪ್ರೊ.ಮಾಲತಿ ಪಟ್ಟಣಶೆಟ್ಟಿ ಅವರುಗಳ ಹೆಸರುಗಳನ್ನು ಶಿಫಾರಸ್ಸು ಮಾಡಿರುವುದಲ್ಲದೇ, ಸಾಹಿತಿಗಳೇ ಆದ ಡಾ.ರಾಮೇಗೌಡ(ರಾಗೌ), ಡಾ.ನಾಗತೀಹಳ್ಳಿ ಚಂದ್ರಶೇಖರ್, ಗುರು ಚನ್ನಬಸಪ್ಪ, ಹಂ.ಪ.ನಾಗರಾಜಯ್ಯ, ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಕೆ.ಎಸ್.ಭಗವಾನ್, ದೇವನೂರು ಮಹಾದೇವ ಸೇರಿದಂತೆ ಹಲವರ ಹೆಸರುಗಳು ಶಿಫಾರಸ್ಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆಯನ್ನು ಅಕ್ಕರೆಯ ನಾಡು, ಸಕ್ಕರೆಯ ನಾಡು ಎಂದು ಹೇಳುತ್ತಿದ್ದರು, ಮತ್ತೊಂದೆಡೆ ಹೆಣ್ಣು ಭ್ರೂಣಹತ್ಯೆಯ ಬೇಸರ ತರಿಸಿದೆ. ಲಿಂಗಾನುಪಾತ, ೧೦೦೦ಕ್ಕೆ ೮೭೫ ಹೆಣ್ಣು, ಬಾಲ್ಯ ವಿವಾಹದಲ್ಲಿ ಮೊದಲ ಸ್ಥಾನ, ಮದುವೆಗೆ ಹೆಣ್ಣು ದೊರೆಯತ್ತಿಲ್ಲ ಎಂಬೆಲ್ಲ ವಿಚಾರಗಳಿಂದಾಗಿ ಸಾಹಿತ್ಯ ಸಮ್ಮೇಳನದ ಧ್ಯೇಯ ಮಹಿಳೆಯೇ ಆಗಬೇಕೆಂಬ ಚರ್ಚೆಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನಾನು ನಾಮನಿರ್ದೇಶಿತನಾದವನಲ್ಲ, ಸಾಹಿತಿಗಳ ನಡುವೆ ಸ್ಪರ್ಧೆ ಮಾಡಿ, ಗೌರವಾನ್ವಿತ ಮತರದಾರರಿಂದ ಆಯ್ಕೆಯಾದವನು. ಅಧ್ಯಕ್ಷನಾಗಿ ಏನು ಮಾಡುತ್ತೇನೆಂದು ಪ್ರಣಾಳಿಕೆಯಲ್ಲಿ ತಿಳಿಸಿ, ದಾಖಲೆಯ ಅಂತರದಿಂದ ಗೆಲುವು ಸಾಧಿಸಿ ನನ್ನ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ೨೦ ಮಂದಿಗೆ ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದೇನೆ ಎಂದು ಸಾಹಿತಿಗಳಲ್ಲದವರು, ಸಹೃದಯವಿಲ್ಲದವರು ಅಧ್ಯಕ್ಷರಾದರೆ ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾಗಲು ಅವಕಾಶ ನೀಡುತ್ತಾರೆ ಎಂಬ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಹೇಳಿಕೆಗೆ ತಿರುಗೇಟು ನೀಡಿದರು.

ಬಿ.ಶಿವಮೂರ್ತಿ ಶಾಸ್ತ್ರಿ, ಜಿ.ನಾರಾಯಣ್, ಹೆಚ್.ಬಿ.ಬಾಲಯ್ಯ, ಹರಿಕೃಷ್ಣ ಕುನೂರು, ಪುಂಡಲೀಕ ಹಾಲಂಬಿ ಸಾಹಿತಿಗಳೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿಲ್ಲವೇ. ನನ್ನ ವಿರುದ್ಧ ಹೇಳಿಕೆ ನೀಡುವ ಎನ್.ಎಲ್.ಮುಕುಂದರಾಜ್ ಚುನಾವಣೆಗೆ ಬರಲಿ, ಚುನಾವಣೆಯಲ್ಲಿ ಗೆಲ್ಲಲಿ ಎಂದು ಸವಾಲು ಎಸೆದರು.
ಕನ್ನಡಕ್ಕೆ ಜಾತಿ, ಎಡ, ಬಲ ಎಂಬ ಪಂಗಡಗಳಿಲ್ಲ, ಎಲ್ಲರೂ ಕನ್ನಡಿಗರೇ, ಕನ್ನಡ ಸಾಹಿತ್ಯ ಪರಿಷತ್ತು ಸಮಗ್ರ ಕನ್ನಡಿಗರನನು ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿದ್ದು, ನಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರ ಪರಿಷತ್ತಿನ ಘನತೆ, ಗೌರವ, ಕನ್ನಡ, ಕರ್ನಾಟಕದ ಹಿರಿಮೆಯ ಜೊತೆಗೆ ಸ್ವಾಯತ್ತತೆಯನ್ನು, ನಮ್ಮ ಮೂಲ ಉದ್ದೇಶವನ್ನು ಎತ್ತಿ ಹಿಡಿಯುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಟೇಲ್ ಪಾಂಡು, ಮೀರಾ ಶಿವಲಿಂಗಯ್ಯ, ಹರ್ಷ ಪಣ್ಣೆದೊಡ್ಡಿ, ಕೃಷ್ಣೇಗೌಡ ಹುಸ್ಕೂರು, ಅಪ್ಪಾಜಪ್ಪ, ಸುಜಾತ ಕೃಷ್ಣ, ಚಂದ್ರಲಿಂಗು ಉಪಸ್ಥಿತರಿದ್ದರು.

Tags: