ಮಂಡ್ಯ:87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲಾ ಸಮಿತಿಗಳಿಗೆ ಸ್ವಯಂ ಸೇವಕರ ಅವಶ್ಯಕತೆ ಇರುತ್ತದೆ. ಹೀಗಾಗಿ, ಸ್ವಯಂ ಸೇವಾ ಸಮಿತಿ ಅವರೊಂದಿಗೆ ಸಮ್ಮೇಳನದ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಸಲಹೆ ನೀಡಿದರು.
ಅವರು ಇಂದು(ಆ.22) ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ವಿವಿಧ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಆಹಾರ, ವೇದಿಕೆ, ವಸತಿ ಸೇರಿದಂತೆ ಸಮಿತಿಗಳಿಗೆ ಅವಶ್ಯಕವಿರುವ ಸ್ವಯಂ ಸೇವಕರ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುಕೊಳ್ಳಿ. ಎನ್.ಎಸ್.ಎಸ್, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ ಗಳಲ್ಲಿ ಜಿಲ್ಲೆಯಲ್ಲಿರುವ ಸಂಖ್ಯೆಯನ್ನು ಲೆಕ್ಕ ಮಾಡಿಕೊಂಡು ನೆರೆ ಜಿಲ್ಲೆಗಳಾದ ಮೈಸೂರು, ರಾಮನಗರ ಜಿಲ್ಲೆಗಳಿಂದ ಸಹ ಸ್ವಯಂಸೇವಕರನ್ನು ಕರೆತಂದು ನೆರವು ಪಡೆಯಬೇಕು. ನಿಯೋಜನೆಯಾಗುವ ಸ್ವಯಂ ಸೇವಕರ ಕೆಲಸ ಅವರ ಕೆಲಸದ ಬಗ್ಗೆ ತರಬೇತಿ ನೀಡಬೇಕು. ಇಲ್ಲವಾದಲ್ಲಿ ಅವರು ಸುಮ್ಮನೆ ತಾವು ತಿಳಿಸುವ ಸ್ಥಳದಲ್ಲಿ ನಿಂತುಕೊಳ್ಳುತ್ತಾರೆ ಎಂದು ಹೇಳಿದರು.
ಪ್ರಚಾರ ಕೆಲಸಗಳನ್ನು ಪ್ರಾರಂಭಿಸಿ
ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಈಗಿನಿಂದಲೇ ಪ್ರಚಾರ ಪ್ರಾರಂಭಿಸಿ. ಮೈಸೂರು, ಶ್ರೀರಂಗಪಟ್ಟಣ, ಚಾಮರಾಜನಗರದಲ್ಲಿ ನಡೆಯುವ ದಸರಾ ಕಾರ್ಯಕ್ರಮದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಚಾರ ಕಾರ್ಯಕ್ರಮ ಕೈಗೊಂಡರೆ ಹೆಚ್ಚಿನ ಜನರನ್ನು ತಲುಪಬಹುದು, ಸಮ್ಮೇಳನ ಕುರಿತು ಹಾಡು ಹಾಗೂ ವಿಶೇಷ ವ್ಯಕ್ತಿಗಳಿಂದ ಆಹ್ವಾನ ಕೋರುವ ಬಗ್ಗೆ ಆಡಿಯೋ ಸಿದ್ಧಪಡಿಸಿಕೊಳ್ಳಿ ಎಂದು ಹೇಳಿದರು.
ಸಿನಿಮಾ ಥಿಯೇಟರ್ ಗಳಲ್ಲಿ ಸಣ್ಣ ಸಮ್ಮೇಳನಕ್ಕೆ ಆಹ್ವಾನಿಸುವ ವಿಡಿಯೋ, ಸಮಾಜಿಕ ಜಾಲತಾಣಗಳಾದ ಇನ್ಸಟಾಗ್ರಾಂ, ಯು ಟ್ಯೂಬ್, ಫೇಸ್ ಬುಕ್, ಬಸ್, ರೈಲ್ವೆ, ವಿಮಾನ ನಿಲ್ದಾಣ, ಮೆಟ್ರೋ, ಎಫ್. ಎಂ. ಗಳಲ್ಲಿ ಪ್ರಚಾರ ಕೈಗೊಳ್ಳಲು ಯೋಜನೆ ರೂಪಿಸಿಕೊಳ್ಳಿ ಎಂದರು.
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಎಲ್ಲಾ ಪತ್ರ ವ್ಯವಹಾರಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಸಂಭ್ರಮ ಲೋಗೋವನ್ನು ಬಳಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಎಚ್.ಎಲ್ ನಾಗರಾಜು ಮಾತನಾಡಿ, ಸಮ್ಮೇಳನದಲ್ಲಿ ಪ್ರತಿ ದಿನ 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಪ್ರತಿದಿನ ಎಷ್ಟು ಸ್ವಯಂ ಸೇವಕರು ಬೇಕಾಗಬಹುದು ಎಂದು ಅಂದಾಜಿಸಿ ಅವರಿಗೆ ಟೀ ಶಟ್೯ , ಟೋಪಿ, ಊಟದ ವ್ಯವಸ್ಥೆ ಬಗ್ಗೆ ಯೋಜನೆ ರೂಪಿಸಿಕೊಳ್ಳಿ ಎಂದರು.
ನೊಂದಣಿ ಸಮಿತಿ ನೊಂದಣಿಗೆ ಅಂತಿಮ ದಿನಾಂಕ ನಿಗದಿ ಮಾಡಿ ಆನ್ ಲೈನ್ ಮೂಲಕ ನೊಂದಣಿಗೆ ಅವಕಾಶ ನೀಡುವುದು. ಇದರಿಂದ ಹಣದ ದುರ್ಬಳಕೆಯಾಗುವುದು, ನೊಂದಣಿ ರಶೀದಿ ನಕಲು ಆಗುವುದು ತಪ್ಪುತ್ತದೆ ಎಂದರು.
87 ಮುಖ್ಯ ರಸ್ತೆಯಲ್ಲಿ ಕಮಾನು ರಾಜ್ಯದ್ಯಾಂತ ಹೆಚ್ಚಿನ ಜನರು ಸಂಚರಿಸುವ 87 ಮುಖ್ಯ ರಸ್ತೆಗಳನ್ನು ಗುರುತಿಸಿ, ರಸ್ತೆಗೆ ಸಮ್ಮೇಳನದ ಪ್ರಚಾರ ನೀಡುವ ಕಮಾನು ಅಳವಡಿಸಬೇಕು ಎಂದರು.
ಸಾರಿಗೆ ಸಮಿತಿಯವರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವಶ್ಯಕವಿರುವ ಸರ್ಕಾರಿ, ಖಾಸಗಿ ವಾಹನಗಳನ್ನು ಪಡೆದುಕೊಂಡು ವಸತಿ ಸ್ಥಳಗಳಿಂದ ಗಣ್ಯರನ್ನು ಕರೆತರಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಂಟ್ರೋಲ್ ರೂಂ ತೆರೆದು ವಾಹನಗಳ ಸಂಚಾರದ ಮಾಹಿತಿಯನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಮನ್ ಮುಲ್ ಅಧ್ಯಕ್ಷ ಬೋರೆಗೌಡ, ಉಪವಿಭಾಗಾಧಿಕಾರಿ ಶಿವಮೂರ್ತಿ, ಉಪಕಾರ್ಯದರ್ಶಿ ಆನಂದ್ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ: ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.