ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ ಕಾಣಿಸಿಕೊಳ್ಳುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿಟ್ಟು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮದುಗೆರೆ ಗ್ರಾಮದ ರೈತ ರವೀಶ್ ಅವರಿಗೆ ಸೇರಿದ 3 ಮೇಕೆಗಳನ್ನು ಒಂದೇ ದಿನ ಹೊತ್ತೊಯ್ದು ತಿಂದು ಹಾಕುವ ಮೂಲಕ ಆತಂಕ ಸೃಷ್ಠಿಸಿದ್ದ ಚಿರತೆಯು ಕಳೆದ ಒಂದು ವಾರದಿಂದ ನಿತ್ಯ ಮದುಗೆರೆ ಗ್ರಾಮದ ಕಾಳಶೆಟ್ಟಿ, ತಿಮ್ಮಮ್ಮ, ದೊಡ್ಡಶೆಟ್ಟಿ, ಸಂಪಿಗೆಶೆಟ್ಟಿ, ಕೃಷ್ಣೇಗೌಡ ಅವರ ಜಮೀನಿನ ಬಳಿ ಕಾಣಿಸಿಕೊಂಡು ಸಾಕು ಪ್ರಾಣಿಗಳನ್ನು ತಿನ್ನಲು ಹೊಂಚು ಹಾಕುತ್ತಿತ್ತು. ಇದನ್ನು ಕಣ್ಣಾರೆ ಕಂಡ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಲನ-ವಲದದ ಬಗ್ಗೆ ಮಾಹಿತಿ ನೀಡಿ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ(ಆರ್.ಎಫ್.ಓ) ಅನಿತಾ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದಕುಮಾರ್ ನೇತೃತ್ವದಲ್ಲಿ ಗುರುವಾರ ರಾತ್ರಿ ಬೋನಿಟ್ಟು ಕಾರ್ಯಾಚರಣೆ ನಡೆಸಿದ್ದರು. ಚಿರತೆಯು ಶುಕ್ರವಾರ ಬೆಳಿಗ್ಗೆ ಬೋನಿನಲ್ಲಿ ಸೆರೆಯಾಗಿದೆ. ಇದರಿಂದಾಗಿ ಮದುಗೆರೆ, ಮತ್ತೀಕೆರೆ ಗ್ರಾಮಗಳ ರೈತರಲ್ಲಿ ಆವರಿಸಿದ್ದ ಆತಂಕ ದೂರವಾಗಿದೆ. ಗ್ರಾಮಸ್ಥರ ದೂರನ್ನು ಆಲಿಸಿ ಸಕಾಲಕ್ಕೆ ಬೋನಿಟ್ಟು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಆರ್.ಎಫ್.ಓ ಅನಿತಾ ಹಾಗೂ ಎ.ಆರ್.ಎಫ್.ಓ ನಂದಕುಮಾರ್ ಮತ್ತು ಸಿಬ್ಬಂದಿ ವರ್ಗದವರನ್ನು ಮುದುಗೆರೆ ಗ್ರಾಮಸ್ಥರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.





