ಮಂಡ್ಯ: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಗುಡುಗು ಸಹಿತ ಜೋರು ಮಳೆಯಿಂದಾಗಿ ಕಾರಿನ ಮೇಲೆ ಮರಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ.
ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್(27) ಮೃತ ಯುವಕನಾಗಿದ್ದಾನೆ. ಈತನ ತಂದೆ ಅನಾರೋಗ್ಯದಿಂದ ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂತೆಯೇ ಮಂಗಳವಾರ ಕಾರ್ತಿಕ್ ಜನ್ಮದಿನವಿತ್ತು. ಈ ಹಿನ್ನೆಲೆಯಲ್ಲಿ ತಂದೆಯ ಆರೋಗ್ಯ ವಿಚಾರಿಸಿಕೊಂಡು ಹಾಗೂ ಹೊಸ ಬಟ್ಟೆ ಖರೀದಿಸಲೆಂದು ನಗರಕ್ಕೆ ಆಗಮಿಸಿದ್ದನು.
ತಂದೆಯ ಆರೋಗ್ಯ ವಿಚಾರಿಸಿ ಹೊರಬರುತ್ತಿದ್ದಂತೆ ಜೋರು ಮಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಬೈಕ್ ನಿಲ್ಲಿಸಿ ಸ್ನೇಹಿತನ ಕಾರು ಹತ್ತಿ ಕುಳಿತಿದ್ದನು. ದುರಾದೃಷ್ಟವಶಾತ್ ಬೃಹತ್ ಗಾತ್ರದ ಮರ ಕಾರಿನ ಮೇಲೆ ಬಿದ್ದು ಸ್ಥಳದಲ್ಲಿಯೇ ಕಾರ್ತಿಕ್ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಕ್ರೇನ್ ಸಹಾಯದಿಂದ ಮರ ತೆರವು ಮಾಡಿದರು. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





