ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿರುವ ಬಗ್ಗೆ ವ್ಯಂಗ್ಯವಾಡಿರುವ ಶ್ರೀರಂಗಪಟ್ಟಣದ ಶಾಸಕ ರಮೇಶ್ ವಿರುದ್ಧ ಎಚ್‌ಡಿಕೆ ಮಗ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರಿಗೆ ಆಗಿರುವ ಆಪರೇಷನ್ನು ಇವರಿಗೆ ಪ್ರೂ ಮಾಡುವ ಅಗತ್ಯವಿಲ್ಲ. ಆಪರೇಷನ್ ಆಗಿದೆ ಎಂಬ ಅನುಕಂಪದಲ್ಲಿ ಮತ ಕೇಳುವ ಪ್ರಮೇಯ ನಮಗೆ ಇಲ್ಲ. ನಮ್ಮ ತಂದೆಗೆ ಆಪರೇಷನ್ ಆಗಿರೋದು ನಿಜ. ಮೂರನೇ ಬಾರಿಗೆ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಿದೆ. ಇದನ್ನು ಸಾಬೀತು ಮಾಡುವ ಅವಶ್ಯಕತೆ ನಮಗೆ ಇಲ್ಲ. ರಮೇಶ್ ಬಂಡಿಸಿದ್ದೇಗೌಡ ಅವರ ಹಿರಿತನಕ್ಕೆ ಈ ಮಾತು ಕ್ಷೋಭೆ ತರಲ್ಲ ಎಂದು ನಿಖಿಲ್ ವಾಗ್ದಾಳಿ ನಡೆಸಿದ್ದಾರೆ.
6 ವರ್ಷದಲ್ಲಿ ಇದು ಮೂರನೇ ಬಾರಿ ಹೃದಯದ ಶಸ್ತ್ರಚಿಕಿತ್ಸೆ ನಡೆದಿದೆ. ಅದರ ನೋವು ನಮಗೆ ಮಾತ್ರ ಗೊತ್ತಿದೆ. ನಮ್ಮ ಕುಟುಂಬ ಯಾವತ್ತು ಮೊಸಳೆ ಕಣ್ಣೀರು ಹಾಕಿಲ್ಲ. ಕುಮಾರಣ್ಣ ಓರ್ವ ಭಾವನಾತ್ಮಕ ಜೀವಿ. ಜನರಿಗೆ ಕಷ್ಟಗಳಾದಾಗ ಕುಮಾಣ್ಣನಿಗೆ ಕಣ್ಣೀರು ಬರುತ್ತೆ. ಕುಮಾರಣ್ಣನ ಸ್ಪರ್ಧೆಯನ್ನು ಕಾಂಗ್ರೆಸ್ ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಹೀಗೆ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ ಎಂದು ಕಿಡಿಕಾರಿದರು.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಕುಮಾರಣ್ಣ ಮಂಡ್ಯ ಅಭ್ಯರ್ಥಿ ಆಗಿದ್ದಾರೆ. ಕಾರ್ಯಕರ್ತರ ಒತ್ತಾಸೆಗೆ ಸೋತು ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕುಮಾರಣ್ಣ ಸ್ಪರ್ಧೆ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಶಕ್ತಿಯನ್ನು ಜನರು ಅವರಿಗೆ ಕೊಟ್ಟಿದ್ದಾರೆ. ಜನರು ಕುಮಾರಣ್ಣನ ಸ್ಪರ್ಧೆ ನಿರ್ಧಾರ ಮಾಡ್ತಾರೆ. ಬೇರೆ ಯಾರು ಅವರ ಸ್ಪರ್ಧೆ ನಿರ್ಣಯ ಮಾಡಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಎನ್‌ಡಿಎ ಮೈತ್ರಿಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಸುಮಲತಾ ಅವರನ್ನು ಸಹಾ ನಾವು ಬೆಂಬಲ ಕೇಳುತ್ತೇವೆ ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.





