Mysore
21
overcast clouds
Light
Dark

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಜೀವನದಿ ಕಾವೇರಿ: ನಿಮಿಷಾಂಭ ದೇವಸ್ಥಾನದ ಮೆಟ್ಟಿಲುಗಳು ಮುಳುಗಡೆ

ಮಂಡ್ಯ: ರೈತರ ಜೀವನಾಡಿ ಕೆಆರ್‌ಎಸ್‌ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ನಿಮಿಷಾಂಭ ದೇವಸ್ಥಾನದ ಮೆಟ್ಟಿಲುಗಳು ಸಂಪೂರ್ಣ ಮುಳುಗಡೆಯಾಗಿವೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಪರಿಣಾಮ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗಿದ್ದು, ಜೀವನದಿ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕೆಆರ್‌ಎಸ್‌ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟಿರುವ ಪರಿಣಾಮ ಕಾವೇರಿ ನದಿ ಪಾತ್ರದಲ್ಲಿ ಭಾರೀ ಪ್ರವಾಹದ ಆತಂಕ ಮನೆಮಾಡಿದ್ದು, ಹಲವು ಪ್ರಸಿದ್ಧ ಕ್ಷೇತ್ರಗಳಿಗೂ ಪ್ರವಾಹ ಆತಂಕ ಎದುರಾಗಿದೆ.

ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನಿಮಿಷಾಂಭ ದೇವಾಲಯಕ್ಕೂ ಕಾವೇರಿ ನದಿ ಪ್ರವಾಹ ಎದುರಾಗಿದ್ದು, ದೇವಾಲಯದ ಸ್ನಾನದ ಮೆಟ್ಟಿಲುಗಳು ಸಂಪೂರ್ಣ ಮುಳುಗಡೆಯಾಗಿವೆ.

ದೇವಾಲಯದ ಮುಂಭಾಗದ ಮೆಟ್ಟಿಲುಗಳ ಬಳಿಯೂ ಕೂಡ ನದಿ ನೀರು ಆವರಿಸಿದ್ದು, ಭಕ್ತರಿಗೆ ನದಿಯ ಬಳಿ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನೂ ದೇವರ ದರ್ಶನಕ್ಕೆ ಬರುವ ಭಕ್ತರೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾಗಿ ತಾಲ್ಲೂಕು ಆಡಳಿತ ಮನವಿ ಮಾಡಿದೆ.

ಮಳೆ ಹೆಚ್ಚಾದರೆ ಕೆಆರ್‌ಎಸ್‌ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಾಗಿ ಇರಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.