ಶ್ರೀನಿವಾಸ್ ಕೆ.ಆರ್ ಪೇಟೆ
ಕೆ.ಆರ್.ಪೇಟೆ: ಜಾನುವಾರುಗಳಿಗೆ ಜೋಳದಕಡ್ಡಿ ಕಟಿಂಗ್ ಮಾಡುವಾಗ ರೈತನ ಎಡಗೈ ಯಂತ್ರಕ್ಕೆ ಸಿಲುಕಿ ತುಂಡಾಗಿರುವ ಘಟನೆ ತಾಲ್ಲೂಕಿನ ಬೋಳಮಾರನಹಳ್ಳಿ ಗ್ರಾಮದಲ್ಲಿ ಶನಿವಾರ (ಮಾ.29) ನಡೆದಿದೆ
ಗ್ರಾಮದ ದೇವನಾಥ್ ಯಂತ್ರಕ್ಕೆ ಸಿಲುಕು ಕೈ ತುಂಡಾಗಿಸಿಕೊಂಡ ರೈತ.
ಮೂರು ಹಾಲು ಕರೆಯುವ ಹಸುಗಳು, ಎರಡು ಬೇಸಾಯದ ಎತ್ತುಗಳನ್ನು ಹೊಂದಿರುವ ರೈತ ದೇವನಾಥ್ ಎಂದಿನಂತೆ ಜಾನುವಾರುಗಳಿಗೆ ಮೇವು ಕತ್ತರಿಸುವ ಯಂತ್ರದಲ್ಲಿ ಜೊಳದ ಮೇವನ್ನು ಕಟಿಂಗ್ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಯಂತ್ರಕ್ಕೆ ಎಡಗೈ ಸಿಲುಕಿ ಕೈ ಬೆರಳುಗಳ ಸಮೇತ ಹಸ್ತವೇ ನಜ್ಜುಗುಜ್ಜಾಗಿ ಮುಂಗೈ ತುಂಡಾಗಿದೆ.
ಮಾನವೀಯತೆ ಮೆರೆದ ಎಂ.ಎಲ್.ಸಿ ಡಾ.ಸೂರಜ್ ರೇವಣ್ಣ
ರೈತ ದೇವನಾಥ್ ಅವರಿಗೆ ಕೈ ತುಂಡಾಗಿದೆ ಎಂಬ ವಿಷಯ ತಿಳಿದ ಕೂಡಲೇ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ಗಾಯಾಳನ್ನು ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತಮ್ಮ ಸ್ವಂತ ಖರ್ಚಿನಿಂದ ಚಿಕಿತ್ಸೆ ಕೊಡಿಸಿ ಶಸ್ತ್ರಚಿಕಿತ್ಸೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಪರಿಹಾರಕ್ಕೆ ಆಗ್ರಹ: ಸೂಕ್ತ ಪರಿಹಾರ ನೀಡಬೇಕು ಎಂದು ಬೋಳಮಾರನಹಳ್ಳಿ ಗ್ರಾಮಸ್ಥರು ತಾಲ್ಲೂಕು ಆಡಳಿತವನ್ನು ಒತ್ತಾಯ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಕಿಕ್ಕೇರಿ ಹೋಬಳಿ ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಆಡಳಿತ ಅಧಿಕಾರಿ ಪ್ರಸನ್ನ, ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಎಂ.ಕಿರಣ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಉಪಾಧ್ಯಕ್ಷ ಮಂಜುನಾಥ್ ಹಾಗೂ ಗ್ರಾಮದ ಮುಖಂಡರು ಭೇಟಿ ಮಾಡಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.